ದೇಶದಲ್ಲಿ ಕಳೆದ 3-4 ವರ್ಷಗಳಲ್ಲಿ 8 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಬೈನಲ್ಲಿ ಶನಿವಾರ 29,400 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಪ್ರತಿಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸಿ ಸರ್ಕಾರದ ಸಾಧನೆಯನ್ನು ಮರೆ ಮಾಚುತ್ತಿವೆ ಎಂದು ಆರೋಪಿಸಿದರು.
ದೇಶದಲ್ಲಿ ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಮಹಿಳೆರು, ಬಡವರು, ರೈತರು ಮತ್ತು ಯುವಕರ ಪರ ಕಾಳಜಿ ಹೊಂದಿದ್ದು, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪ್ರತಿಪಕ್ಷಗಳ ನಡೆಯನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಅಟಲ್ ಸೇತು ಬಿರುಕು ಬಿಟ್ಟಿದೆ ಎಂದು ಸುಳ್ಳು ಸುದ್ದಿ ಹರಡಿಸಲಾಗಿದೆ. ಆದರೆ ಅಟಲ್ ಸೇತು ಸೇತುವೆಯ ಉಪಯೋಗ ಜನರು ಪಡೆಯುತ್ತಿದ್ದಾರೆ. ಪ್ರತಿದಿನ 20 ಸಾವಿರ ವಾಹನಗಳು ಸಂಚರಿಸುತ್ತಿದ್ದು, ಪ್ರತಿದಿನ 25 ಲಕ್ಷ ಲೀಟರ್ ಪೆಟ್ರೋಲ್ ಉಳಿತಾಯವಾಗುತ್ತಿದೆ ಎಂದು ಅವರು ನುಡಿದರು.
ಮುಂಬೈನಲ್ಲಿ ಕೇವಲ 8 ಕಿ.ಮೀ. ಮೆಟ್ರೊ ಸೇವೆ ಇತ್ತು. ಈಗ 80 ಕಿ.ಮೀ.ಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ 200 ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ಮೋದಿ ವಿವರಿಸಿದರು.