Friday, November 22, 2024
Google search engine
Homeಕ್ರೀಡೆ45 ಪ್ರಶಸ್ತಿಯೊಂದಿಗೆ ವಿಶ್ವದಾಖಲೆ ಬರೆದ ಲಿಯೊನೆಲ್ ಮೆಸ್ಸಿ!

45 ಪ್ರಶಸ್ತಿಯೊಂದಿಗೆ ವಿಶ್ವದಾಖಲೆ ಬರೆದ ಲಿಯೊನೆಲ್ ಮೆಸ್ಸಿ!

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಸತತ 2ನೇ ಬಾರಿ ಕೋಪಾ ಅಮೆರಿಕ ಫುಟ್ಬಾಲ್ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ನಾಯಕನಾಗಿ ಒಟ್ಟಾರೆ 45 ಪ್ರಶಸ್ತಿಯ ವಿಶ್ವದಾಖಲೆ ಬರೆದಿದ್ದಾರೆ.

ಸೋಮವಾರ ಮುಂಜಾನೆ ಫ್ಲೋರಿಡಾದಲ್ಲಿ ನಡೆದ ಕೊಲಂಬಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಾಯಗೊಂಡು ಪಂದ್ಯದ ಮಧ್ಯೆ ಮೆಸ್ಸಿ ಹೊರನಡೆದರು. ಮಹತ್ವದ ಪಂದ್ಯದಲ್ಲಿ ಗಾಯಗೊಂಡು ಕಣ್ಣೀರು ಹಾಕಿದ ಲಿಯೊನೆಸ್ಸಿಗೆ ಅದು ಕೆಲವೇ ನಿಮಿಷಗಳಲ್ಲಿ ಆನಂದಭಾಷ್ಮವಾಗಿ ಪರಿವರ್ತನೆಗೊಂಡಿತು.

ಬದಲಿ ಆಟಗಾರನಾಗಿ ಹೆಚ್ಚುವರಿ ಆಟದ ವೇಳೆ ಅಖಾಡಕ್ಕಿಳಿದ ಲೌಟಾರೊ ಮಾರ್ಟಿನೆಸ್ ಪಂದ್ಯದ 111ನೇ ನಿಮಿಷದಲ್ಲಿ ಗೋಲು ಸಿಡಿಸಿ ಅರ್ಜೆಂಟೀನಾಗೆ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಅರ್ಜೆಂಟೀನಾ 1-0ಯಿಂದ ಕೊಲಂಬಿಯಾ ವಿರುದ್ಧ ರೋಚಕ ಜಯ ಸಾಧಿಸಿತು.

ಲಿಯೊನೆಲ್ ಮೆಸ್ಸಿ ನೇತೃತ್ವದಲ್ಲಿ ಅರ್ಜೆಂಟೀನಾ ಗೆದ್ದ ಸತತ 3ನೇ ಪ್ರಶಸ್ತಿಯಾಗಿದೆ. ಅದರಲ್ಲೂ ವಿಶ್ವಕಪ್ ನಂತರ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದಿರುವುದು ದೊಡ್ಡ ಸಾಧನೆ ಆಗಿದೆ.

ಲಿಯೊನೆಲ್ ಮೆಸ್ಸಿ ಅರ್ಜೆಂಟೀನಾ ತಂಡದ ನಾಯಕನಾಗಿ ಹಾಗೂ ತಾವು ಪ್ರತಿನಿಧಿಸಿದ ಕ್ಲಬ್ ಗಳ ನಾಯಕನಾಗಿ ಒಟ್ಟಾರೆ 45 ಪ್ರಶಸ್ತಿ ಗೆದ್ದು ಬ್ರೆಜಿಲ್ ನ ಡೇನಿ ಅಲ್ವಾಸ್ ದಾಖಲೆಯನ್ನು ಮುರಿದರು.

ಮೆಸ್ಸಿ ಕ್ಲಬ್ ತಂಡದ ನಾಯಕನಾಗಿ 39 ಪ್ರಶಸ್ತಿ ಗೆದ್ದಿದ್ದಾರೆ. ಅದರಲ್ಲಿ ಅತೀ ಹೆಚ್ಚು ಬಾರ್ಸಿಲೋನಾ ಪರ ಬಂದಿವೆ. 6 ಪ್ರಶಸ್ತಿಗಳು ಅರ್ಜೆಂಟೀನಾ ಪರ ಬಂದಿದ್ದು, ಅದರಲ್ಲಿ 2 ಕೋಪಾ ಅಮೆರಿಕ ಮತ್ತು ಒಂದು ವಿಶ್ವಕಪ್ ಆಗಿದೆ. ಅಲ್ಲದೇ 17 ವರ್ಷದೊಳಗಿನವರ ವಿಶ್ವಕಪ್ ಹಾಗೂ 2008ರ ಒಲಿಂಪಿಕ್ಸ್ ಪ್ರಶಸ್ತಿ ಕೂಡ ಸೇರಿವೆ.

ಪ್ರಸ್ತುತ 40ರ ಹೊಸ್ತಿಲಲ್ಲಿರುವ ಮೆಸ್ಸಿ 1068 ಫುಟ್ಬಾಲ್ ಪಂದ್ಯಗಳಲ್ಲಿ 838 ಗೋಲು ಬಾರಿಸಿದ್ದು, 374 ಗೋಲು ಬಾರಿಸಲು ನೆರವಾಗಿದ್ದಾರೆ.

ಕಣ್ಣೀರಿನ ವಿದಾಯ

ಲಿಯೊನೆಲ್ ಮೆಸ್ಸಿ ಫೈನಲ್ ನಲ್ಲಿ ಗಾಯಗೊಂಡು ಮಧ್ಯದಲ್ಲಿಯೇ ಮೈದಾನದ ತೊರೆದರು. ಇದು ಕೊನೆಯ ಕೋಪಾ ಅಮೆರಿಕ ಟೂರ್ನಿ ಆಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಮುಂದಿನ ಬಾರಿ ಅರ್ಜೇಂಟೀನಾ ತಂಡವನ್ನು ಪ್ರತಿನಿಧಿಸುವುದು ಅನುಮಾನವಾಗಿದೆ.

ಫೈನಲ್ ಪಂದ್ಯದ 64ನೇ ನಿಮಿಷದಲ್ಲಿ ಮೊಣಕಾಲು ಉಳುಕಿದ್ದರಿಂದ ಲಿಯೊನೆಲ್ ಮೆಸ್ಸಿ ಆಡಲು ಸಾಧ್ಯವಾಗದೇ ಕುಸಿದುಬಿದ್ದರು. ಆ ಸಂದರ್ಭದಲ್ಲಿ ಪಂದ್ಯ 0-0ಯಿಂದ ಸಮಬಲದಲ್ಲಿದ್ದು ಮೆಸ್ಸಿ ಅವರ ಅವಶ್ಯಕತೆ ತಂಡಕ್ಕೆ ಅನಿವಾರ್ಯವಾಗಿತ್ತು.

ಆದರೆ ಮೆಸ್ಸಿ ಆಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ವೈದ್ಯರು ಮೈದಾನದಿಂದ ಹೊರಗೆ ಕರೆದುಕೊಂಡು ಬಂದು ಬದಲಿ ಆಟಗಾರನನ್ನು ಕಣಕ್ಕಿಳಿಸಿದರು. ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೊನೆಯವರೆಗೂ ಆಡದೇ ತಂಡವನ್ನು ಗೆಲ್ಲಿಸುವ ಅವಕಾಶ ಸಿಗದೇ ಮೆಸ್ಸಿ ಕಣ್ಣೀರು ಹಾಕುತ್ತಾ ಕುಳಿತಿದ್ದರು.

ಪಂದ್ಯದ ನಿಗದಿತ ಸಮಯ ಮುಗಿದರೂ ಎರಡೂ ತಂಡಗಳು ಗೋಲು ದಾಖಲಿಸಲು ವಿಫಲವಾಗಿದ್ದರಿಂದ ಹೆಚ್ಚುವರಿ ಆಟ ತಲುಪಿತು. ಈ ವೇಳೆ ಬದಲಿ ಆಟಗಾರನಾಗಿ ಕಣಕ್ಕಿಳಿದ ಲೌಟಾರೊ ಮಾರ್ಟಿನೆಸ್ 111ನೇ ನಿಮಿಷದಲ್ಲಿ ಗೋಲು ಸಿಡಿಸಿ ಅರ್ಜೆಂಟೀನಾಗೆ ರೋಚಕ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಅರ್ಜೆಂಟೀನಾ ದಾಖಲೆಯ 16ನೇ ಬಾರಿ ಪ್ರಶಸ್ತಿಗೆ ಮುತ್ತಿಟ್ಟ ದಾಖಲೆ ಬರೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments