ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದ ಬಿಜೆಪಿಗೆ ಇದೀಗ ರಾಜ್ಯಸಭೆಯಲ್ಲೂ ತನ್ನ ಬಲ ಕಳೆದುಕೊಳ್ಳುವ ಮೂಲಕ ಬಹುಮತದ ಕೊರತೆ ಎದುರಿಸುವಂತಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ಕಾನೂನು, ನಿಯಮ ಜಾರಿಗೆ ತರಬೇಕಾದರೂ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ರಾಜ್ಯಸಭಾ ಸದಸ್ಯರಾದ ಬಿಜೆಪಿಯ ರಾಕೇಶ್ ಸಿನ್ಹಾ, ರಾಮ್ ಶಾಕಾಲ್, ಸೋನಾಲ್ ಮನ್ ಸಿಂಗ್ ಮತ್ತು ಮಹೇಶ್ ಜೇಠಲ್ಮಾನಿ ಅವರ ಅವಧಿ ಶನಿವಾರಕ್ಕೆ ಅಂತ್ಯಗೊಂಡಿದೆ. ಇದರಿಂದ ಬಿಜೆಪಿಯ ಸದಸ್ಯರ ಸಂಖ್ಯೆಯಲ್ಲಿ 4 ಕುಸಿತ ಆಗಿದ್ದು, ಒಟ್ಟಾರೆ ರಾಜ್ಯಸಭಾ ಸದಸ್ಯರ ಸಂಖ್ಯೆ 86ಕ್ಕೆ ಕುಸಿದಿದೆ.
ನಾಲ್ವರು ನಾಮಂಕಿತ ಸದಸ್ಯರಾಗಿದ್ದ ನಾಲ್ವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೇವೆಯಿಂದ ನಿರ್ಗಮಿಸಲು ರಾಷ್ಟ್ರಪತಿ ಮರ್ಮು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಚಿಸಿದ್ದರು.
ನಾಲ್ವರು ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಬಿಜೆಪಿಯ ಬಲ 86ಕ್ಕೆ ಕುಸಿದಿದೆ. ಇದರಿಂದ ಎನ್ ಡಿಎ ಮೈತ್ರಿಕೂಟದ ಬಲ ಕೂಡ 101ಕ್ಕೆ ಇಳಿದಿದೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಪ್ರಸ್ತುತ 225 ಸದಸ್ಯರನ್ನು ಹೊಂದಿದ್ದು, ಬಹುಮತ ಪಡೆಯಬೇಕಾದರೆ 113 ಸದಸ್ಯರ ಬಲ ಹೊಂದಿರಬೇಕು. ಇದರಿಂದ ಬಹುಮತಕ್ಕೆ 12ರ ಕೊರತೆ ಎದುರಿಸುವಂತಾಗಿದೆ.
ಇಂಡಿಯಾ ಮೈತ್ರಿಕೂಟದ ಬಲ 87ಕ್ಕೆ ಏರಿಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ 26, ಪಶ್ಚಿಮ ಬಂಗಾಳ 13, ದೆಹಲಿಯಲ್ಲಿ ಮತ್ತು ತಮಿಳುನಾಡಿನಲ್ಲಿ ಅಧಿಕಾರ ಹೊಂದಿರುವ ಆಮ್ ಆದ್ಮಿ ಮತ್ತು ಡಿಎಂಕೆ ತಲಾ 10 ಸ್ಥಾನಗಳನ್ನು ಗಳಿಸಿದೆ.
ತೆಲಂಗಾಣದ ಕೆಸಿ. ಚಂದ್ರಶೇಖರ್, ಜಗನ್ ಮೋಹನ್ ರೆಡ್ಡಿ ಮತ್ತು ಎಐಎಡಿಎಂಕೆ ಪಕ್ಷಗಳು ಉಳಿದ ಸ್ಥಾನಗಳನ್ನು ಹೊಂದಿದ್ದು, ಇವು ಯಾವ ಪಕ್ಷದಲ್ಲೂ ಗುರುತಿಸಿಕೊಳ್ಳದೇ ತಟಸ್ಥವಾಗಿವೆ. ಅಲ್ಲದೇ ವಿಷಯಾಧಾರಿತವಾಗಿ ಬೆಂಬಲ ನೀಡುವ ಭರವಸೆ ನೀಡಿವೆ.
ಕಳೆದ 10 ವರ್ಷಗಳಲ್ಲಿ ಏಕಪಕ್ಷೀಯ ತೀರ್ಮಾನಗಳನ್ನು ಚರ್ಚೆಗಳೇ ಇಲ್ಲದೇ ಕೈಗೊಂಡು ಕಾನೂನುಗಳನ್ನು ರೂಪಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಇನ್ನು ಮುಂದೆ ಯಾವುದೇ ಕಾನೂನು ತರುವುದು ಸುಲಭವಾಗಿರುವುದಿಲ್ಲ.
ಲೋಕಸಭೆಯಲ್ಲಿ ಮಂಡನೆ ಆಗಿ ಅಲ್ಲಿ ಸದಸ್ಯರ ಬಹುಮತದ ಅನುಮೋದನೆ ಪಡೆದ ನಂತರ ರಾಜ್ಯಸಭೆಯಲ್ಲೂ ಒಪ್ಪಿಗೆ ದೊರೆತರೆ ಮಾತ್ರ ಕಾಯ್ದೆ, ಕಾನೂನುಗಳು ರಾಷ್ಟ್ರಪತಿ ಬಳಿಗೆ ಹೋಗಲಿದೆ.