ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಜುಲೈ 19ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇಸ್ರೊ ಹವಾಮಾನ ಮುನ್ಸೂಚನೆ ನೀಡಿದ್ದು, ಕರಾವಳಿ ಹಾಗೂ ಮಲೆನಾಡು, ಒಳನಾಡು ಪ್ರದೇಶಗಳಲ್ಲಿ ವಾರಪೂರ್ತಿ ಇದೇ ರೀತಿಯ ವಾತಾವರಣ ಮುಂದುವರಿಯಲಿದ್ದು, ಜುಲೈ 19ರವರೆಗೆ ಭಾರೀಯಿಂದ ಅತೀ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹೇಳಿದೆ.
ಉತ್ತರ ಒಳನಾಡು, ದಕ್ಷಿಣ ಒಳನಾಡುಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಸಾಧಾರಣದಿಂದ ಭಾರೀ ಮಳೆಯಾಗಲಿದ್ದು, ಇದೇ ರೀತಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
24 ಗಂಟೆಯಲ್ಲಿ ಭಾರೀ ಮಳೆ
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಭಾರೀ ಮಳೆಯಾಗಿದ್ದು, 26.4 ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ ಜುಲೈ 16ರಂದು 9.1 ಮಿ.ಮೀ. ಮಳೆಯಾಗುತ್ತಿದ್ದು, ಈ ಬಾರಿ ವಾಡಿಕೆಗಿಂತ ಶೇ.190ರಷ್ಟು ಹೆಚ್ಚು ಮಳೆಯಾಗಿದೆ.
ಜೂನ್ ತಿಂಗಳಲ್ಲಿ 199 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.3ರಷ್ಟು ಕಡಿಮೆ ಮಳೆಯಾಗಿತ್ತು. ಆದರೆ ಜುಲೈ ತಿಂಗಳಲ್ಲಿ 16ರವರೆಗೆ ವಾಡಿಕೆಯಂತೆ 136 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 180 ಮಿ.ಮೀ. ಮಳೆಯಾಗಿದ್ದು, ಶೇ.32ರಷ್ಟು ಹೆಚ್ಚು ಮಳೆಯಾಗಿದೆ.
ಮುಂಗಾರು ಅವಧಿಯಾದ ಜೂನ್ 1ರಿಂದ ಜುಲೈ 16ರ ಅವಧಿಯಲ್ಲಿ ವಾಡಿಕೆಯಂತೆ 336 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಜುಲೈನಲ್ಲಿ ಮುಂಗಾರು ಚುರುಕುಗೊಂಡಿದ್ದರಿಂದ 382 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.14ರಷ್ಟು ಮಳೆಯಾಗಿದೆ.
ರಾಜ್ಯದಲ್ಲಿ ಜಲಾಶಯಗಳಲ್ಲಿ ಒಟ್ಟಾರೆ 895.62 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದುವರೆಗೂ ಶೇ.50ರಷ್ಟು ಅಂದರೆ 445 .67 ಟಿಎಂಸಿ ನೀರು ಮಾತ್ರ ಜಲಾಶಯಗಳು ಭರ್ತಿಯಾಗಿವೆ.
ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿ ಶೇ.68ರಷ್ಟು ನೀರು ಸಂಗ್ರಹವಾಗಿದ್ದರೆ, ಕೃಷ್ಣ ಕಣಿವೆ ಜಲಾಶಯಗಳಲ್ಲಿ ಶೇ.54ರಷ್ಟು ನೀರು ಸಂಗ್ರಹವಾಗಿದೆ. ಕೊಡಗು ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಕೆಆರ್ ಎಸ್ ಒಳಹರಿವು ದಿಢೀರನೆ 25,993 ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವುದರಿಂದ ವಾರದಲ್ಲಿ 7 ಅಡಿಯಷ್ಟು ನೀರು ಭರ್ತಿಯಾಗಿದೆ. ಕೆಆರ್ ಎಸ್ ಗರಿಷ್ಠ ಮಟ್ಟ 124 ಅಡಿ ಆಗಿದ್ದು, ಮಂಗಳವಾರ ಬೆಳಿಗ್ಗೆ 107 ಅಡಿಯಷ್ಟು ನೀರು ಭರ್ತಿಯಾಗಿತ್ತು.