ವಿಧಾನ ಪರಿಷತ್: ಪ್ರಸಕ್ತ ಸಾಲಿನಲ್ಲಿ ಆಹಾರೋತ್ಪದನೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರೈತರಿಗೆ ಸಕಾಲಕ್ಕೆ ಸಾಲಸೌಲಭ್ಯವನ್ನು ನೀಡಲಾಗುವುದು. ಜತೆಗೆ ಈಗಾಗಲೇ ಹಾಕಿಕೊಳ್ಳಲಾಗಿರುವ 35.10 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ. ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡುವ ಗುರಿಯನ್ನು ತಲುಪಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಪರಿಷತ್ತಿನಲ್ಲಿ ಶಾಸಕರಾದ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದರು.
ಕರ್ನಾಟಕದಲ್ಲಿ ಆಹಾರ ಉತ್ಪಾದನೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಕಳೆದ ವರ್ಷ 148 ಲಕ್ಷ ಟನ್ ಆಹಾರೋತ್ಪಾದನೆ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಉತ್ಪಾದನೆಯಾಗಿದ್ದ 128 ಲಕ್ಷ ಟನ್ ಆಗಿದೆ. ಅಂದರೆ 20 ಲಕ್ಷ ಟನ್ ಆಹಾರೋತ್ಪಾದನೆಯ ಕೊರತೆ ಉಂಟಾಗಿದೆ. ಹೀಗಾಗಿ ಆಹಾರೋತ್ಪಾದನೆಯಲ್ಲಿ ಹೆಚ್ಚಳವಾಗಬೇಕೆಂದರೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಉಪಕರಣಗಳು ಮತ್ತು ಕಾರ್ಮಿಕ ವೆಚ್ಚವನ್ನು ಭರಿಸಲು ರೈತರಿಗೆ ಸಕಾಲಕ್ಕೆ ಸಾಲ ಸಿಗಬೇಕು. ಹೀಗಾಗಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಸಹಕಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರಿಗೆ ಮನವಿ ಮಾಡಿದರು.
ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆದ ಶಾಸಕರಾದ ದಿನೇಶ್ ಗೂಳಿಗೌಡ ಅವರು, ಕಳೆದ ವರ್ಷದಲ್ಲಾದ ಆಹಾರ ಉತ್ಪಾದನೆ ಕೊರತೆ ಹಾಗೂ ಸಾಲ ವಿತರಣೆ ಗುರಿ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಹಕಾರ ಸಚಿವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ/ಡಿಸಿಸಿ ಬ್ಯಾಂಕುಗಳು/ಪಿಕಾರ್ಡ್ ಬ್ಯಾಂಕುಗಳ ಮೂಲಕ 2023-24 ನೇ ಸಾಲಿನಲ್ಲಿ ಬೆಳೆ ಸಾಲ, ಮಧ್ಯಮಾವಧಿ, ದೀರ್ಘಾವಧಿ ಸಾಲದಡಿ 35 ಲಕ್ಷ ರೈತರಿಗೆ ರೂ.25,000 ಕೋಟಿಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿತ್ತು. ಈ ನಿಟ್ಟಿನಲ್ಲಿ 29,81,165 ರೈತರಿಗೆ 24,499.87 ರೂ. ಕೃಷಿ ಸಾಲ ವಿತರಿಸಲಾಗಿದ್ದು, ಶೇ.98 ರಷ್ಟು ಸಾಧನೆ ಮಾಡಲಾಗಿದೆ ಎಂದು ಉತ್ತರಿಸಿದರು.
ಶಾಸಕ ದಿನೇಶ್ ಗೂಳಿಗೌಡ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶೇಕಡಾ 100ರಷ್ಟು ಗುರಿ ಸಾಧನೆ ಮಾಡಲು ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು. ಈ ವರ್ಷ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ರಾಜ್ಯದಲ್ಲಿ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಬಿತ್ತನೆ ಮಾಡುವ ಗುರಿಯನ್ನು ಹಾಕಿಕೊಂಡಿದ್ದಾರೆ. ಆದರೆ, ಇದುವರೆಗೆ ಬಿತ್ತನೆಯಾಗಿರುವುದು 62 ಲಕ್ಷ ಹೆಕ್ಟೇರ್ ಆಗಿದೆ. ಇನ್ನೂ 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದೆ. ಹೀಗಾಗಿ ರೈತರಿಗೆ ಯಾವುದೇ ಸಮಸ್ಯೆಯಾಗದೇ ಸಾಲಸೌಲಭ್ಯ ಸಿಗುವ ಕೆಲಸ ಆಗಬೇಕಿದೆ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎನ್. ರಾಜಣ್ಣ, 2024-25ನೇ ಸಾಲಿಗೆ 35.10 ಲಕ್ಷ ರೈತರಿಗೆ 25,000 ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.90 ಲಕ್ಷ ರೈತರಿಗೆ 2000 ಕೋಟಿ ರೂ.ಗಳ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸಲು ಗುರಿ ನಿಗದಿಪಡಿಸಿದ್ದು, 2566.02 ಕೋಟಿ ರೂ.ಗಳ ಹೆಚ್ಚಿನ ಕೃಷಿ ಸಾಲವನ್ನು ವಿತರಿಸಲಾಗುವುದು ಎಂದು ಹೇಳಿದರು.
ಮಧ್ಯಪ್ರವೇಶಿಸಿದ ಶಾಸಕರಾದ ದಿನೇಶ್ ಗೂಳಿಗೌಡ, ಕಳೆದ ವರ್ಷ 3 ಲಕ್ಷ ರೂ. ಇದ್ದ ಶೂನ್ಯ ಬಡ್ಡಿದರ ಸಾಲದ ಮೊತ್ತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 5 ಲಕ್ಷ ರೂ.ಗೆ ಏರಿಕೆ ಮಾಡಿದ್ದರು. ಆದರೆ, ಈ ಅನುಕೂಲವು ಎಲ್ಲ ರೈತರಿಗೂ ಸಿಗುತ್ತಿಲ್ಲ. ಕೇವಲ ಸಿ.ಟಿ.ರವಿ, ಬೋಜೇಗೌಡರಂತಹವರಿಗೆ ಮಾತ್ರ ಸಿಗುತ್ತಿದೆ. ಈ ಸಾಲವು ಚಡ್ಡಿ ಹಾಕಿಕೊಂಡು ಹೊಲದಲ್ಲಿ ಕಾಯಕ ಮಾಡುವ ರೈತರಿಗೂ ಸಿಗುವಂತಾಗಬೇಕು. ಹೀಗಾದಲ್ಲಿ ಆಹಾರೋತ್ಪಾದನೆ ಪ್ರಮಾಣದಲ್ಲಿ ಹೆಚ್ಚಳವಾಗುವುದಲ್ಲದೆ, ರೈತರಿಗೆ ಸಹ ಅನುಕೂಲವಾಗುತ್ತದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರಾದ ಕೆ.ಎನ್. ರಾಜಣ್ಣ, 5 ಲಕ್ಷ ರೂ.ಗೆ ಶೂನ್ಯ ಬಡ್ಡಿ ದರ ಸಾಲವನ್ನು ಎಲ್ಲರಿಗೂ ನೀಡಲು ಬರುವುದಿಲ್ಲ. ಆಯಾ ರೈತರ ಜಮೀನು, ಬೆಳೆ, ಇಳುವರಿಗಳ ಮೇಲೆ ಅವಲಂಬಿತವಾಗಿರುತ್ತದೆ. ಅವರವರ ಅರ್ಹತೆಯನ್ನು ಪರಾಮರ್ಶಿಸಿ ಸಾಲವನ್ನು ವಿತರಣೆ ಮಾಡಲಾಗುತ್ತದೆ. ಸಾಲ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವ ನಿರ್ದಿಷ್ಟ ಪ್ರಕರಣಗಳಿದ್ದರೆ ಗಮನಕ್ಕೆ ತನ್ನಿ, ಕ್ರಮ ಕೈಗೊಳ್ಳಲಾಗುವುದು. ಆದರೆ, ಎಲ್ಲ ಅರ್ಹ ರೈತರಿಗೂ ಸಾಲ ವಿತರಿಸಲು ಕ್ರಮವಹಿಸುವುದಾಗಿ ಹೇಳಿದರು.