ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳಿಗೆ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.
ಬೆಂಗಳೂರು ಮತ್ತು ತುಮಕೂರು ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ಮುಂದೆ ಗುರುವಾರ ಹಾಜರುಪಡಿಸಲಾಗಿದ್ದು, ತನಿಖೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.
ಆರೋಪಿಗಳು ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ತಾಂತ್ರಿಕ, ಭೌತಿಕ ಮತ್ತು ವೈಜ್ಞಾನಿಕ ಪುರಾವೆಗಳನ್ನು ನಾಶಮಾಡಲು ಯತ್ನಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನ ಅವಧಿ ವಿಸ್ತರಿಸುವಂತೆ ಸರ್ಕಾರಿ ಪರ ವಕೀಲರು ವಾದಿಸಿದ್ದರು.
ಕೊಲೆಗೂ ಮುನ್ನ ಹಾಗೂ ನಂತರ ವಿವಿಧ ವ್ಯಕ್ತಿಗಳನ್ನು ಸಂಪರ್ಕಿಸಲು ವಿವಿಧ ಹೆಸರಿನಲ್ಲಿ ನೋಂದಾಯಿಸಲಾದ ಹಲವು ಸಿಮ್ ಕಾರ್ಡ್‌ಗಳನ್ನು ಆರೋಪಿಗಳು ಬಳಸಿರುವುದು ಪತ್ತೆಯಾಗಿದೆ. ಜಾಮೀನು ನೀಡುವುದರಿಂದ ನಿರ್ಣಾಯಕ ಸಾಕ್ಷ್ಯ ನಾಶಕ್ಕೆ ಕಾರಣವಾಗಬಹುದು ಎಂದು ಪ್ರಾಸಿಕ್ಯೂಷನ್ ಒತ್ತಿ ಹೇಳಿದೆ.
ಇದೇ ವೇಳೆ ಜೈಲೂಟ ಹೊಂದಾಣಿಕೆ ಆಗುತ್ತಿಲ್ಲ. ಆದ್ದರಿಂದ ಮನೆ ಊಟ ಬೇಕು ಎಂಬ ದರ್ಶನ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ. ಜೈಲಾಧಿಕಾರಿಗಳು ದರ್ಶನ್ ಗೆ ಪೋಷ್ಠಿಕಾಂಶದ ಆಹಾರವನ್ನೇ ನೀಡಲಾಗುತ್ತಿದೆ ಎಂದು ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.