ಕನ್ನಡಿಗರ ಜೀವನಾಡಿಯಾದ ಕಾವೇರಿ ತುಂಬಿ ಹರಿಯುತ್ತಿದ್ದು, ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಕೆಆರ್ ಎಸ್ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಲಿದೆ.
ಕಾವೇರಿ ಜಲನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಜಲಾಶಯ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ ಇದೆ.
ಗುರುವಾರ ಬೆಳಿಗ್ಗೆ ಕೆಆರ್ ಎಸ್ ನಲ್ಲಿ 116 ಅಡಿಗಳಷ್ಟು ನೀರು ತುಂಬಿದ್ದು, ಶುಕ್ರವಾರ ಸಂಜೆ ವೇಳೆಗೆ 120ರ ಅಡಿ ಗಡಿ ದಾಟುವ ಸಾಧ್ಯತೆ ಇದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124 ಅಡಿ ಆಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನೀರು ಹೊರಬಿಡಲು ತೀರ್ಮಾನಿಸಲಾಗಿದೆ.
ಕೆಆರ್ ಎಸ್ ಡ್ಯಾಂನಲ್ಲಿ ಒಳಹರಿವು ಹೆಚ್ಚಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ 10 ಸಾವಿರದಿಂದ 25 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡುವ ಸಾಧ್ಯತೆ ಇದೆ. ಇದರಿಂದ ಕೆಆರ್ ಎಸ್ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಜನರು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಪ್ರಸ್ತುತ ಒಳಹರಿವು 40 ಸಾವಿರ ಕ್ಯೂಸೆಕ್ಸ್ ಇದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ನೀರು ಹೊರಗೆ ಬಿಡಲಾಗುವುದು ಎಂದು ಕಾವೇರಿ ನಿಗಮ ಪ್ರಕರಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರು ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಕ್ರಮ ವಹಿಸುವಂತೆ ಕಾವೇರಿ ನೀರಾವರಿ ನಿಗಮ ಮನವಿ ಮಾಡಿದೆ.