ಸಂಘಟಿತ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ 7 ವಿಕೆಟ್ ಗಳ ಭಾರೀ ಅಂತರದಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ವನಿತೆಯರ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಡಂಬುಲಾದಲ್ಲಿ ಶುಕ್ರವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವನ್ನು 19.2 ಓವರ್ ಗಳಲ್ಲಿ 108 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದ ಭಾರತ ತಂಡ 14.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸುಲಭ ಮೊತ್ತ ಬೆಂಬತ್ತಿದ ಭಾರತ ತಂಡ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್ ಗೆ 85 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಸ್ಮೃತಿ ಮಂದಾನ 31 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 41 ರನ್ ಬಾರಿಸಿ ಔಟಾದರು. ಶೆಫಾಲಿ ವರ್ಮಾ 29 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 40 ರನ್ ಸಿಡಿಸಿ ನಿರ್ಗಮಿಸಿದರು.
ಡಯಾಲಿನ್ ಹೆಮಲತಾ (14) ಗಳಿಸಿದರೆ, ಹರ್ಮನ್ ಪ್ರೀತ್ ಕೌರ್ (ಅಜೇಯ 5) ಮತ್ತು ಜೆಮಿಹಾ ರೋಡ್ರಿಗಜ್ (ಅಜೇಯ 4) ತಂಡವನ್ನು ಗೆಲುವಿನ ದಡ ದಾಟಿಸಿದರು. ಈ ಮೂಲಕ ಭಾರತ ವನಿತೆಯರು ಏಷ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧದ 7 ಮುಖಾಮುಖಿಯಲ್ಲಿ 6-1ರಿಂದ ಮೇಲುಗೈ ಕಾಯ್ದುಕೊಂಡಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಭಾರತದ ಸಂಘಟಿತ ದಾಳಿಗೆ ಕುಸಿಯಿತು. ದೀಪ್ತಿ ಶರ್ಮ 3 ವಿಕೆಟ್ ಪಡೆದು ಮಿಂಚಿದರೆ, ರೇಣುಕಾ ಸಿಂಗ್, ಪೂಜಾ ವಸ್ತ್ರಾಕರ್ ಮತ್ತು ಶ್ರೇಯಾಂಕಾ ಪಾಟೀಲ್ ತಲಾ 2 ವಿಕೆಟ್ ಗಳಿಸಿದರು.
ಪಾಕಿಸ್ತಾನ ಪರ ಸಿದ್ರಾ ಅಮಿನ್ (25), ಟುಬಾ ಹಸನ್ (22) ಮತ್ತು ಫಾತಿಮಾ ಸಾನಾ (22) ತಕ್ಕಮಟ್ಟಿಗೆ ಪ್ರದರ್ಶನ ನೀಡಿ ತಂಡವನ್ನು ಕಾಪಾಡಲು ಯತ್ನಿಸಿದರು. ಆದರೆ ಉಳಿದ ಆಟಗಾರ್ತಿಯರು ವಿಫಲರಾಗಿದ್ದರಿಂದ ತಂಡ ಕಳಪೆ ಮೊತ್ತಕ್ಕೆ ಕುಸಿಯಿತು.