ವಿಕೆಟ್ ಕೀಪರ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಲಿದ್ದು, ಅವರನ್ನು ಸೆಳೆಯಲು ಫ್ರಾಂಚೈಸಿಗಳ ನಡುವೆ ಪೈಪೋಟಿ ನಡೆದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ನಾಯಕ ರಿಷಭ್ ಪಂತ್ ಸ್ಥಾನಕ್ಕೂ ಕುತ್ತು ಬಂದಿದೆ ಎಂದು ಹೇಳಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದದ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿರುವ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಂಡದಲ್ಲಿ ಸಮಗ್ರ ಬದಲಾವಣೆಗೆ ಮುಂದಾಗಿದ್ದು, ರಿಷಭ್ ಪಂತ್ ಅವರನ್ನು ತಂಡದಿಂದ ಕೈಬಿಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಗಾಯದಿಂದ ಚೇತರಿಸಿಕೊಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ ರಿಷಭ್ ಪಂತ್ ತಂಡದ ಪರ ಅತ್ಯಧಿಕ ರನ್ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೇ ಉತ್ತಮ ಆರಂಭ ಪಡೆದರೂ ತಂಡ ಮಧ್ಯದಲ್ಲಿ ಎಡವಿ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿತ್ತು.
ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯುತ್ತದ್ದು, ಮುಂದಿನ ಆವೃತ್ತಿಯ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಕೆಟ್ ಕೀಪರ್ ಮತ್ತು ಉತ್ತಮ ಬ್ಯಾಟ್ಸ್ ಮನ್ ಆಗಿರುವ ರಿಷಭ್ ಪಂತ್ ಅವರನ್ನು ಸೆಳೆಯಲು ಫ್ರಾಂಚೈಸಿಗಳು ಸಿದ್ಧತೆ ನಡೆಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮಂಚೂಣಿಯಲ್ಲಿದೆ.
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೇಳಲು ಬಯಸಿದರೂ ಸೂಕ್ತ ವಿಕೆಟ್ ಕೀಪರ್ ಕೊರತೆ ಕಾರಣ ಅನಿವಾರ್ಯವಾಗಿ ತಂಡದಲ್ಲಿ ಮುಂದುವರಿದಿದ್ದಾರೆ. ಧೋನಿ ಈ ಬಾರಿ ಕಣಕ್ಕಿಳಿಯದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅವರ ಸ್ಥಾನಕ್ಕೆ ರಿಷಭ್ ಪಂತ್ ಸೂಕ್ತ ಎಂದು ತಂಡದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.