ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿರುವ ಕೆಎಲ್ ರಾಹುಲ್ (kl rahul) ಮತ್ತು ಮುಂಬೈ ಇಂಡಿಯನ್ಸ್ (mumbai indians) ತಂಡವನ್ನು ತೊರೆಯಲಿರುವ ರೋಹಿತ್ ಶರ್ಮ ಇಬ್ಬರಲ್ಲಿ ಒಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು (rcb) ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ‍್ಯತೆ ಇದೆ.
2024ನೇ ಸಾಲಿನಲ್ಲಿ ನಡೆದ ಕೆಲವು ಅಹಿತಕರ ಘಟನೆಗಳಿಂದ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ. ಇದೇ ವೇಳೆ ನಾಯಕ ಪಟ್ಟದಿಂದ ಕೆಳಗಿಳಿಸಲ್ಪಟ್ಟ ರೋಹಿತ್ ಶರ್ಮ ಅವರನ್ನು ಸೆಳೆಯಲು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ ಸಿಬಿ ನಡುವೆ ಪೈಪೋಟಿ ಉಂಟಾಗಿದೆ.
ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮ ಇಬ್ಬರನ್ನೂ ತಂಡಕ್ಕೆ ಕರೆತರಲು ಆರ್ ಸಿಬಿ ಯೋಜನೆ ರೂಪಿಸಿದೆ. ಹರಾಜು ಪ್ರಕ್ರಿಯೆ ವೇಳೆ ಈ ಇಬ್ಬರನ್ನು ಸೆಳೆಯಲು ಯಶಸ್ವಿಯಾದರೆ ತಂಡದ ನಾಯಕ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.
ಮೂಲಗಳ ಪ್ರಕಾರ ಕನ್ನಡಿಗ ಎಂಬ ಕಾರಣಕ್ಕೆ ಕೆಎಲ್ ರಾಹುಲ್ ಗೆ ನಾಯಕ ಸ್ಥಾನ ವಹಿಸುವ ಸಾಧ್ಯತೆ ಇದೆ. ಆದರೆ ಕಳೆದ ಬಾರಿಯೇ ವಿರಾಟ್ ಕೊಹ್ಲಿ ಆಹ್ವಾನ ನೀಡಿದ್ದರೂ ತಿರಸ್ಕರಿಸಿ ಲಕ್ನೋ ಸೇರಿದ್ದ ರಾಹುಲ್ ಈಗ ಪಶ್ಚಾತಾಪಗೊಂಡಿದ್ದು, ಆರ್ ಸಿಬಿಗೆ ಮರಳಲು ಚಿಂತನೆ ನಡೆಸಿದ್ದಾರೆ.
ಆರ್ ಸಿಬಿ ಫಾಫ್ ಡು ಪ್ಲೆಸಿಸ್ ಸಾರಥ್ಯದಲ್ಲಿ 3 ವರ್ಷ ಆಡಿದ್ದರೂ ಪ್ರಶಸ್ತಿ ಬಂದಿಲ್ಲ. ಅದರಲ್ಲೂ ಒಂದು ಬಾರಿ ಮಾತ್ರ ಪ್ಲೇಆಫ್ ಸುತ್ತು ಪ್ರವೇಶಿಸಿದೆ. ಇದುವರೆಗೆ ವಿದೇಶೀ ಆಟಗಾರರತ್ತ ಗಮನ ಹರಿಸಿದ್ದ ಆರ್ ಸಿಬಿ ಇದೀಗ ದೇಶೀಯ ಆಟಗಾರರತ್ತ ಒಲವು ತೋರಿದೆ. ಈ ಹಿನ್ನೆಲೆಯಲ್ಲಿ 2025ರ ಆವೃತ್ತಿಯಿಂದ ಫಾಫ್ ಡು ಪ್ಲೆಸಿಸ್ ಅವರನ್ನು ಕೈಬಿಡಲು ಚಿಂತನೆ ನಡೆಸಿದೆ. ಆದರೆ ಕೇವಲ ನಾಯಕ ಪಟ್ಟದಿಂದ ಇಳಿಸುತ್ತದೋ ಅಥವಾ ತಂಡದಿಂದಲೇ ಕೈಬಿಡುತ್ತದೋ ಎಂಬುದು ಕಾದು ನೋಡಬೇಕಿದೆ.
ಮತ್ತೊಂದೆಡೆ ಟಿ-20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮತ್ತಷ್ಟು ಹತ್ತಿರವಾಗಿದ್ದು, ರೋಹಿತ್ ಶರ್ಮ ಅವರನ್ನು ಸೆಳೆಯಲು ವಿರಾಟ್ ಕೊಹ್ಲಿ ಖುದ್ದು ಮುತುವರ್ಜಿ ವಹಿಸಿದ್ದಾರೆ ಎನ್ನಲಾಗಿದೆ. ರೋಹಿತ್ ಶರ್ಮ ಟಿ-20 ನಾಯಕನಾಗಿ ಯಶಸ್ವಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಬಾರಿ ಪ್ರಶಸ್ತಿ ತಂದುಕೊಟ್ಟಿದ್ದರೆ, ಒಂದು ಬಾರಿ ಭಾರತಕ್ಕೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.
ಇದೇ ವೇಳೆ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಕೂಡ ತಮ್ಮ ತಂಡಗಳನ್ನು ತೊರೆಯಲಿದ್ದಾರೆ.
ಧೋನಿ 2025ರಲ್ಲಿ ಚೆನ್ನೈ ಪರ ಕಣಕ್ಕಿಳಿಯುವುದಿಲ್ಲ ಎಂದು ತಂಡ ಖಚಿತಪಡಿಸಿದ್ದು, ಅವರ ಸ್ಥಾನವನ್ನು ರಿಷಭ್ ಪಂತ್ ತುಂಬಲು ಚೆನ್ನೈ ಸೂಪರ್ ಕಿಂಗ್ಸ್ ಪ್ರಯತ್ನಿಸಲಿದೆ.