ಐಟಿ ಕಂಪನಿಗಳಲ್ಲಿ ದಿನಕ್ಕೆ 14 ಗಂಟೆಗಳ ಕೆಲಸದ ಅವಧಿ ಸೀಮಿತಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ವಿಧೇಯಕ ಮಂಡನೆಗೆ ಮುಂದಾಗಿದ್ದ ರಾಜ್ಯ ಸರಕಾರ ಉದ್ದಿಮೆದಾರರ ತೀವ್ರ ವಿರೋಧದಿಂದಾಗಿ ತಡೆ ನೀಡಿತ್ತು. ಇದೀಗ ಕಾರ್ಮಿಕ ಇಲಾಖೆ ಐಟಿ ಕಂಪನಿಗಳಲ್ಲಿ ಕನಿಷ್ಠ 14 ಗಂಟೆಗಳ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾಪ ಮುಂದಿಟ್ಟಿದೆ.
ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಐಟಿ ಕಂಪನಿಗಳ ಜೊತೆಗಿನ ರಾಜ್ಯ ಕಾರ್ಮಿಕ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮದ ಅಡಿಯಲ್ಲಿ ಕನಿಷ್ಠ 14 ಗಂಟೆಗಳ ದುಡಿಮೆಯ ಅವಧಿ ಕುರಿತು ಪ್ರಸ್ತಾಪವಾಗಿದೆ.
ಹೊಸ ನಿಯಮದ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ರಾಜ್ಯ ಸರ್ಕಾರದ ಹೊಸ ಪ್ರಸ್ತಾಪಕ್ಕೆ ರಾಜ್ಯ ಐಟಿ/ಐಟಿಇಎಸ್ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಪ್ರಸ್ತುತ ಐಟಿ ಕಂಪನಿಗಳಲ್ಲಿ ಓವರ್ ಟೈಮ್ ಸೇರಿದಂತೆ ಗರಿಷ್ಠ 10 ಗಂಟೆಗಳ ದುಡಿಮೆಯ ಅವಧಿ ನಿಗದಿಯಾಗಿದೆ. ದುಡಿಮೆಯ ಅವಧಿ ಹೆಚ್ಚಿಸಿದರೆ ಐಟಿ ಕಂಪನಿಗಳು ಈಗಿರುವ ಮೂರು ಹಂತದ ಶಿಫ್ಟ್ ಗಳನ್ನು ತೆಗೆದುಹಾಕಿ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡಿಸಲಿದೆ. ಇದರಿಂದ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಸಂಘಟನೆ ಹೇಳಿದೆ.
ಐಟಿ ಕಂಪನಿಗಳಲ್ಲಿ ಕೆಲಸದ ಒತ್ತಡದಿಂದ ಈಗಾಗಲೇ ಶೇ.45ರಷ್ಟು ಉದ್ಯೋಗಿಗಳು ಮಾನಸಿಕ ಖಿನ್ನತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ.55ರಷ್ಟು ಜನರು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಶೇ. 35ರಷ್ಟು ಉದ್ಯೋಗಿಗಳು ಅವಧಿಗೂ ಮುನ್ನ ಮರಣದ ಭೀತಿ ಎದುರಿಸುತ್ತಿದ್ದಾರೆ. ಶೇ.17ರಷ್ಟು ಜನರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಿದೆ ಎಂದು ಸಂಘಟನೆ ವಿವರಿಸಿದೆ.