ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ವನಿತೆಯರ ತಂಡ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ 78 ರನ್ ಗಳ ಭಾರೀ ಅಂತರದ ಜಯ ಸಾಧಿಸಿದೆ.
ಶ್ರೀಲಂಕಾದ ಡಂಬುಲ್ಲಾದಲ್ಲಿ ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಪೇರಿಸಿತು. ಏಷ್ಯಾಕಪ್ ಇತಿಹಾಸದಲ್ಲೇ ಅತೀ ದೊಡ್ಡ ಮೊತ್ತದ ದಾಖಲೆ ಬೆಂಬತ್ತಿದ ಯುಎಇ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಸಂಘಟಿತ ದಾಳಿಗೆ ತತ್ತರಿಸಿದ ಯುಎಇ ತಂಡ ಕಳಪೆ ಸಾಧಾರಣ ಮೊತ್ತಕ್ಕೆ ಕುಸಿಯಿತು. ಕವಿಶಾ ಎಗೊಡ್ಜೆ (40) ಮತ್ತು ನಾಯಕಿ ಇಶಾ ಒಜಾ (38) ಮಾತ್ರ ಸ್ವಲ್ಪ ಹೋರಾಟ ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ತಂಡ ಏಷ್ಯಾಕಪ್ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ದಾಖಲಿಸಿದ ದಾಖಲೆ ಬರೆದಿದೆ. ವಿಶೇಷ ಅಂದರೆ ಅತೀ ಹೆಚ್ಚು ರನ್ ಗಳಿಸಿದ ಮೊದಲ ಮೂರು ಸ್ಥಾನದಲ್ಲೂ ಭಾರತೀಯರೇ ಇದ್ದಾರೆ.
ಇದಕ್ಕೂ ಮುನ್ನ ಭಾರತ ತಂಡ 2022ರಲ್ಲಿ ಮಲೇಷ್ಯಾ ವಿರುದ್ಧ 4 ವಿಕೆಟ್ ಗೆ 181 ರನ್ ಗಳಿಸಿದ್ದರೆ, ಇದೇ ಯುಎಇ ವಿರುದ್ಧ 5 ವಿಕೆಟ್ ಗೆ 178 ರನ್ ಗಳಿಸಿತ್ತು.
ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 66 ರನ್ ಗಳಿಸಿದರೆ, ರಿಚಾ ಘೋಷ್ 29 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 64 ರನ್ ಸಿಡಿಸಿ ಔಟಾಗದೇ ಉಳಿದರು. ಇವರಿಬ್ಬರು 5ನೇ ವಿಕೆಟ್ ಗೆ 75 ರನ್ ಪೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.