ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಮೇಲೆ ಜಲ್ಲಿಕಲ್ಲು ಮಿಶ್ರಿತ ಮಣ್ಣು ಸುರಿದು ಜೀವಂತ ಸಮಾಧಿ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಮಂಗವಾ ಪೊಲೀಸ್ ಠಾಣಾ ವ್ಯಾಪ್ತಿಯ ಹಿನೋಟಾ ಜೊರೋಟ್ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಪ್ರತಿಭಟನಾಕಾರರ ಮೇಲೆ ಜಲ್ಲಿಕಲ್ಲು ಮಿಶ್ರಿತ ಮಣ್ಣು ಸುರಿದು ಹತ್ಯೆಗೆ ಯತ್ನಿಸಲಾಗಿದೆ.
ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಲಾರಿಯಿಂದ ದಿಢೀರ್ ಮಣ್ಣು ಸುರಿದಿದ್ದರಿಂದ ಕುತ್ತಿಗೆಯವರೆಗೂ ಮಣ್ಣು ಬಿದ್ದು ಮಮತಾ ಪಾಂಡೆ ಮತ್ತು ಆಶಾ ಪಾಂಡೆ ಜೀವಂತ ಸಮಾಧಿ ಆಗುವ ಸ್ಥಿತಿಯಲ್ಲಿದ್ದರು. ಆದರೆ ಪ್ರತಿಭಟನಾ ನಿರತರು ಕೂಡಲೇ ಅವರನ್ನು ರಕ್ಷಿಸಿದ್ದರಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಮಹಿಳೆಯರು ಮಣ್ಣು ತುಂಬಿದ ಲಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾಗ ಚಾಲಕ ಮಣ್ಣು ಡೌನ್ ಲೋಡ್ ಮಾಡಿದ್ದಾನೆ. ಇದರಿಂದ ಇಬ್ಬರು ಮಹಿಳೆಯರು ಸಿಲುಕಿದ್ದಾರೆ. ಈ ಭೀಕರ ದೃಶ್ಯ ಮೊಬೈಲ್ ವೀಡಿಯೊದಲ್ಲಿ ಸೆರೆಯಾಗಿದೆ.
ರಕ್ಷಿಸಲಾದ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಲ್ಲಿಕಲ್ಲು ಮಿಶ್ರಿತ ಮಣ್ಣನ್ನು ಮಹಿಳೆಯರ ಮೇಲೆ ಸುರಿದ ಲಾರಿ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.