ಭಾರತದ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ 2027ರ ವಿಶ್ವಕಪ್ ವರೆಗೂ ಆಡಬಹುದು ಎಂದು ಭಾರತ ತಂಡದ ಮುಖ್ಯ ಕೋಚ್ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತ ತಂಡದ ಕೋಚ್ ಸ್ಥಾನ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2027 ಏಕದಿನ ವಿಶ್ವಕಪ್ ವರೆಗೂ ಕೊಹ್ಲಿ ಮತ್ತು ರೋಹಿತ್ ಶರ್ಮ ಏಕದಿನ ಮತ್ತು ಟೆಸ್ಟ್ ಗಳಲ್ಲಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಭಾರತ ತಂಡದ ದಿಗ್ಗಜರಾದ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಏಕದಿನ ಮತ್ತು ಟೆಸ್ಟ್ ನಲ್ಲಿ ಆಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಅವರು ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಕ್ರಿಕೆಟ್ ಜೀವನ 2025ರ ನಂತರವೂ ಮುಂದುವರಿಯಲಿದೆ. ಅವರ ಸೇವೆ ತಂಡಕ್ಕೆ ಅತ್ಯಗತ್ಯವಾಗಿದೆ. ಈ ಇಬ್ಬರು ಆಟಗಾರರು ದೊಡ್ಡ ವೇದಿಕೆಗಳಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದು ಟಿ-20 ವಿಶ್ವಕಪ್ ಆಗಲಿ, ಏಕದಿನ ವಿಶ್ವಕಪ್ ಆಗಲಿ ಅವರ ಕೊಡುಗೆ ಮರೆಯಲಾಗದು, ಅವರು ಫಿಟ್ನೆಸ್ ಉಳಿಸಿಕೊಂಡರೆ 2027ರ ವಿಶ್ವಕಪ್ ವರೆಗೂ ಆಡಬಹುದು ಎಂದು ಗಂಭೀರ್ ವಿವರಿಸಿದರು.
ಅಂತಿಮವಾಗಿ ಇದು ಅವರ ವೈಯಕ್ತಿಕ ತೀರ್ಮಾನ. ಅವರಲ್ಲಿ ಕ್ರಿಕೆಟ್ ಇನ್ನೂ ಎಷ್ಟು ಇದೆ. ತಂಡಕ್ಕೆ ಸಾಕಷ್ಟು ಕೊಡುಗೆ ಸಲ್ಲಿಸುವ ಸಾಮರ್ಥ್ಯ ಎಷ್ಟಿದೆ ಎಂದು ಅವರು ನಿರ್ಧರಿಸಬೇಕು. ಅವರು ಅದ್ಭುತ ಆಟಗಾರರು ಅವರಲ್ಲಿ ಸಾಕಷ್ಟು ಕ್ರಿಕೆಟ್ ಇದೆ. ನನ್ನ ಪ್ರಕಾರ ಸಾಕಷ್ಟು ದೀರ್ಘ ಕಾಲದವರೆಗೆ ಅವರು ತಂಡದಲ್ಲಿ ಇರುತ್ತಾರೆ ಎಂದು ಗಂಭೀರ್ ಅಭಿಪ್ರಾಯಪಟ್ಟರು.