ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳೆಯರ ಪ್ರೀಮಿಯರ್ ಲೀಗ್ ಡಬ್ಲೂಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಆರ್ ಸಿಬಿ ಮೊದಲ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿ ಇತಿಹಾಸ ಬರೆದಿದೆ.
ಡೆಲ್ಲಿಯಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಆರ್ ಸಿಬಿ ವನಿತೆಯರ ತಂಡ 8 ವಿಕೆಟ್ ಗಳಿಂದ ಜಯಭೇರಿ ಬಾರಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಮೂಲಕ ಐಪಿಎಲ್ ನಲ್ಲಿ ಪುರುಷರ ತಂಡಕ್ಕೆ ಮರೀಚಿಕೆಯಾಗಿದ್ದ ಪ್ರಶಸ್ತಿಯನ್ನು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಿಯಾಂಕಾ ಪಾಟೀಲ್ ಮಾರಕ ದಾಳಿಗೆ ತತ್ತರಿಸಿ 18.3 ಓವರ್ ಗಳಲ್ಲಿ 113 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಆರ್ ಸಿಬಿ 19.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರ್ ಸಿಬಿ ತಂಡಕ್ಕೆ ನಾಯಕ ಸ್ಮೃತಿ ಮಂದಾನ ಮತ್ತು ಸೋಫಿ ಡಿವೈನ್ ಮೊದಲ ವಿಕೆಟ್ ಗೆ 49 ರನ್ ಜೊತೆಯಾಟ ನಿಭಾಯಿಸಿ ಉತ್ತಮ ಆರಂಭ ತಂದುಕೊಟ್ಟರು. ಸ್ಮೃತಿ ಮಂದಾನ 39 ಎಸೆತಗಳಲ್ಲಿ 3 ಬೌಂಡರಿ ಸೇರಿದ 31 ರನ್ ಬಾರಿಸಿ ಔಟಾದರೆ, ಸೋಫಿ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 32 ರನ್ ಗಳಿಸಿ ನಿರ್ಗಮನಿಸಿದರು.
ಇವರಿಬ್ಬರ ನಿರ್ಗಮನದ ನಂತರ ಜೊತೆಯಾದ ಎಲ್ಸಿ ಪೆರ್ರಿ ಮತ್ತು ರೀಚಾ ಘೋಷ್ ಮುರಿಯದ ಮೂರನೇ ವಿಕೆಟ್ ಗೆ 33 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಎಲ್ಸಿ ಪೆರ್ರಿ 37 ಎಸೆತಗಳಲ್ಲಿ 4 ಬೌಂಡರಿ ಸಹಿತ ಔಟಾಗದೇ 35 ರನ್ ಬಾರಿಸಿದರೆ, ರೀಚಾ ಘೋಷ್ 17 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 17 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರಿಯಾಂಕಾ ಪಾಟೀಲ್ ಮತ್ತು ಸೋಫಿ ಮೋಲಿನೆಕ್ಸ್ ಮಾರಕ ದಾಳಿ ನಡೆಸಿ ಕಟ್ಟಿ ಹಾಕಿದರು. ಪ್ರಿಯಾಂಕಾ 12 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಸೋಫಿ 20 ರನ್ ನೀಡಿ 3 ವಿಕೆಟ್ ಮತ್ತು ಆಶಾ ಸೋಬಾನೆ 14 ರನ್ ನೀಡಿ 2 ವಿಕೆಟ್ ಪಡೆದರು.