ಕರ್ನಾಟಕದಿಂದ ರಾಜ್ಯಸಭೆಗೆ ಸತತ ಎರಡನೇ ಬಾರಿ ಪ್ರವೇಶಿಸಿರುವ ವಿತ್ತ ಸಚಿವೆ ದಾಖಲೆಯ 7ನೇ ಬಾರಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ತಾವು ಆಯ್ಕೆಯಾದ ಕರ್ನಾಟಕವನ್ನೇ ನಿರ್ಲಕ್ಷಿಸಿ ಮತ್ತೊಮ್ಮೆ ಚೊಂಬು ನೀಡಿದ್ದಾರೆ.
ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ನಲ್ಲಿ ಹೈದರಾಬಾದ್-ಕರ್ನಾಟಕ ಕಾರಿಡಾರ್ ಯೋಜನೆ ಪ್ರಕಟಿಸಿದ್ದು ಬಿಟ್ಟರೆ ಯಾವುದೇ ಘೋಷಣೆ ಮಾಡಿಲ್ಲ. ಇದು ಕೂಡ ಪರೋಕ್ಷವಾಗಿ ಬೇರೆ ರಾಜ್ಯಕ್ಕೆ ಅನುಕೂಲವೇ ಹೊರತು ರಾಜ್ಯಕ್ಕೆ ಯಾವುದೇ ಲಾಭವಿಲ್ಲ.
ಕರ್ನಾಟಕಕ್ಕೆ ಬಹುಬೇಡಿಕೆಯ ರೈಲ್ವೆ ಯೋಜನೆ ಆಗಲಿ, ನೀರಾವರಿ ಯೋಜನೆಗಾಗಲಿ ಯಾವುದೇ ಘೋಷಣೆ ಮಾಡಲಾಗಿಲ್ಲ. ಬದಲಾಗಿ ಕೆರೆ ಹೂಳೆತ್ತುವ ಯೋಜನೆಗೆ ನೆರವು ಮತ್ತು ರಾಜ್ಯಗಳ ಮೂಲಭೂತ ಸೌಕರ್ಯಕ್ಕಾಗಿ 50 ವರ್ಷದವರೆಗೆ 1.5 ಲಕ್ಷ ಕೋಟಿವರೆಗೆ ತೆರಿಗೆ ರಹಿತ ಸಾಲ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಆದರೆ ಇದು ಇಡೀ ದೇಶಕ್ಕೆ ಅನ್ವಯ ಆಗುವುದರಿಂದ ರಾಜ್ಯಕ್ಕೆ ಎಷ್ಟು ಸಿಗುತ್ತದೆ ಎಂಬದು ಊಹಿಸಲು ಸಾಧ್ಯವೇ ಇಲ್ಲ.
ಬಿಜೆಪಿ ಮೂರನೇ ಬಾರಿ ಸರ್ಕಾರ ರಚನೆಗೆ ಸಹಕರಿಸಿದ ಜೆಡಿಯು ಆಡಳಿತದ ಬಿಹಾರ ಮತ್ತು ತೆಲುಗುದೇಶಂ ಆಡಳಿತದ ಆಂಧ್ರಪ್ರದೇಶಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ.
ಬಿಹಾರಕ್ಕೆ ಎರಡು ರೈಲ್ವೆ ಯೋಜನೆಗಳು, ಬುದ್ದ ಗಯಾ ಮತ್ತು ನಳಂದವನ್ನು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಸಂಪೂರ್ಣ ನೆರವು ಘೋಷಿಸಿದ್ದಾರೆ. ಅಲ್ಲದ ಬಿಹಾರಕ್ಕೆ 26 ಸಾವಿರ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಮತ್ತು ಆಂಧ್ರಪ್ರದೇಶಕ್ಕೆ 15 ಸಾವಿರ ಕೋಟಿ ರೂ. ಆರ್ಥಿ ಪ್ಯಾಕೇಜ್ ನೀಡಲಾಗಿದೆ.