ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಕಾಪಿ ಪೇಸ್ಟ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಕಟಿಸಿದ್ದ ಪ್ರಣಾಳಿಕೆಯ ಕೆಲವೊಂದು ವಿಷಯಗಳನ್ನು ಕಾಪಿ ಮಾಡಿ ಯಥಾವತ್ತಾಗಿ ಬಳಸಿದ್ದಾರೆ. ಪಕ್ಷದ ಪ್ರಣಾಳಿಕೆ ಬಗ್ಗೆ ಟೀಕೆ ಮಾಡಿದವರು ಅದನ್ನು ಜಾರಿಗೆ ತರಲು ಮುಂದಾಗಿರುವುದು ಅವರ ದೌರ್ಬಲ್ಯ ಹಾಗೂ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ನಮ್ಮ ಪಕ್ಷ ಪೆಹಲಿ ನೌಕರಿ ಪಕ್ಕಿ (ಮೊದಲು ಕೆಲಸ ಖಚಿತ) ಎಂಬ ಘೋಷಣೆಯಡಿ ಪ್ರಣಾಳಿಕೆ ಪ್ರಕಟಿಸಿದ್ದೆವು. ಅದರಂತೆ ಯುವಕರಿಗೆ ಒಂದು ತಿಂಗಳ ವೇತನ ರೂಪದಲ್ಲಿ ಶಿಷ್ಯವೇತನ ಹಾಗೂ ಖಾಸಗಿ ಕಂಪನಿಗಳಲ್ಲಿ ಇಂಟರ್ನ್ ಶಿಪ್ ಕೊಡಿಸುವುದಾಗಿ ಹೇಳಿದ್ದವು. ಅದನ್ನು ನಿರ್ಮಲಾ ಸೀತಾರಾಮನ್ ಕಾಪಿಚಿಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಓದಿದ್ದಾರೆ ಎಂಬುದು ಇದರಿಂದ ಖಚಿತವಾಗುತ್ತದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪುಟ 30 ಮತ್ತು ಪುಟ 11ರಲ್ಲಿ ಪ್ರಸ್ತಾಪಿಸಿದ ನಿರುದ್ಯೋಗ ಸಮಸ್ಯೆಗೆ ಪರಿಹಾರಗಳಲ್ಲಿ ಕೆಲವೊಂದನ್ನು ಜಾರಿಗೆ ತಂದಿದ್ದಾರೆ ಎಂದಿದ್ದಾರೆ.