ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮಿಂಚಿನ ಅರ್ಧಶತಕದ ಸಹಾಯದಿಂದ ಭಾರತ ವನಿತೆಯರ ತಂಡ 82 ರನ್ ಗಳ ಭಾರೀ ಅಂತರದಿಂದ ನೇಪಾಳ ತಂಡವನ್ನು ಸೋಲಿಸಿ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಶ್ರೀಲಂಕಾದ ಡಂಬುಲ್ಲಾದಲ್ಲಿ ಮಂಗಳವಾರ ನಡೆದ `ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರು 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ನೇಪಾಳ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಮಾರಕ ದಾಳಿಗೆ ತತ್ತರಿಸಿದ ನೇಪಾಳ ತಂಡ ರನ್ ಗಳಿಸಲು ಪರದಾಡಿತು. ನೇಪಾಳ ಪರ ಸೀತಾ ರಾಣಾ (18), ನಾಯಕಿ ಇಂದು ಬರ್ಮ (14) ಮತ್ತು ರುಬಿನಾ ಛೆಟ್ರಿ (15) ಮತ್ತು ಬಿಂದು ರಾವಲ್ (17) ತಕ್ಕಮಟ್ಟಿಗೆ ಪ್ರತಿರೋಧ ಒಡ್ಡಿದರು.
ಭಾರತದ ಪರ ದೀಪ್ತಿ ಶರ್ಮ 3, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ತಲಾ 2 ವಿಕೆಟ್ ಗಳಿಸಿದರು. ರೇಣುಕಾ ಸಿಂಗ್ 1 ವಿಕೆಟ್ ಪಡೆದರು.
ಭಾರತದ ಪರ ಶೆಫಾಮಿ ವರ್ಮಾ ಮತ್ತು ಆರಂಭಿಕ ಆಟಗಾರ್ತಿಯಾಗಿ ಬಡ್ತಿ ಪಡೆದ ಡಯಾಲಿನ್ ಹೇಮಲತಾ ಮೊದಲ ವಿಕೆಟ್ ಗೆ 122 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ಶೆಫಾಲಿ ವರ್ಮಾ 48 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 81 ರನ್ ಸಿಡಿಸಿ ಔಟಾದರೆ, ಹೇಮಲತಾ 42 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 47 ರನ್ ಗಳಿಸಿದರು. ಜೆಮಿಹಾ ರೋಡ್ರಿಗಜ್ (28) ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.