ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಜುಲೈ 27ರಂದು ಕರೆಯಲಾಗಿರುವ ನೀತಿ ಆಯೋಗದ ಸಭೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಬಹಿಷ್ಕರಿಸಿವೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಹಿಮಾಚಲ ಪ್ರದೇಶ ಸಿಎಂ ಸುಕ್ವಿಂದರ್ ಸಿಂಗ್ ಸುಕ್ಕು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.
ನರೇಂದ್ರ ಮೋದಿ ಸತತ ಮೂರನೇ ಬಾರಿ ಪ್ರಧಾನಮಂತ್ರಿ ಪದವಿ ಅಲಂಕರಿಸಿದ ನಂತರ ಮೊದಲ ಬಾರಿ ಕರೆದಿರುವ ನೀತಿ ಆಯೋಗದ ಸಭೆಯ ದೆಹಲಿಯಲ್ಲಿ ಜುಲೈ 27ರಂದು ನಡೆಯಲಿದೆ. ಸಭೆಯನ್ನು ಬಹಿಷ್ಕರಿಸುವ ಕಾಂಗ್ರೆಸ್ ಸಿಎಂಗಳ ಜೊತೆ ತಮಿಳುನಾಡಿನ ಸಿಎಂ ಹಾಗೂ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಕೂಡ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ದಕ್ಷಿಣ ಭಾರತ ರಾಜ್ಯಗಳನ್ನು ಅದರಲ್ಲೂ ಕಾಂಗ್ರೆಸ್ ಆಡಳಿತದ ರಾಜ್ಯಗಳನ್ನು ಕಡೆಗಣಿಸಿ ಉತ್ತರ ಭಾರತ ಹಾಗೂ ಬಿಜೆಪಿ ಹಾಗೂ ಮಿತ್ರಪಕ್ಷಗಳಿಗೆ ಮಾತ್ರ ಅನುದಾನ ನೀಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಮಂಗಳವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಪ್ರಕಟಿಸಿದ ಬಜೆಟ್ ನಲ್ಲಿ ಕರ್ನಾಟಕವನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ತಾರತಮ್ಯ ನೀತಿಯನ್ನು ಖಂಡಿಸಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಕರ್ನಾಟಕವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಮೂಲಕ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದನ್ನು ಖಂಡಿಸಿ ನೀತಿ ಆಯೋಗ ಸಭೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾಗಿ ಸಿದ್ದರಾಮಯ್ಯ ವಿವರಿಸಿದ್ದಾರೆ.