ರಷ್ಯಾ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಭಾರೀ ಅಂತರದ ಜಯ ಸಾಧಿಸಿದ ಬೆನ್ನಲ್ಲೇ ಯುರೋಪ್ ದೇಶಗಳಿಗೆ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ್ದಾರೆ.
ವ್ಲಾದಿಮಿರ್ ಪುಟಿನ್ ರಷ್ಯಾ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಜಯಭೇರಿ ಬಾರಿಸಿದರು. ಇದರ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಮೆರಿಕ ಹಾಗೂ ನ್ಯಾಟೊ ಸೇನೆ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮಧ್ಯಪ್ರವೇಶಿಸಿದರೆ ನ್ಯೂಕ್ಲಿಯರ್ ದಾಳಿಗೆ ಹಿಂಜರಿಯುವುದಿಲ್ಲ ಎಂದಿದ್ದಾರೆ.
ಉಕ್ರೇನ್ ಮೇಲಿನ ಯುದ್ಧ ೨ ವರ್ಷ ಪೂರೈಸಿದೆ. ಫ್ರೆಂಚ್ ಮತ್ತು ಇಂಗ್ಲೀಷ್ ಮಾತನಾಡುವ ಸೈನಿಕರು ಈಗಾಗಲೇ ಉಕ್ರೇನ್ ನಲ್ಲಿ ಬೀಡುಬಿಟ್ಟಿರುವುದನ್ನು ನಮ್ಮ ಸೈನಿಕರು ಗಮನಿಸಿದ್ದಾರೆ. ಹಾಗಾಗಿ ಇದು ಮೂರನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಡುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ನಾವು ರಾಜತಾಂತ್ರಿಕ ಸಂಧಾನ ನಡೆಸುತ್ತಿದ್ದೇವೆ. ಒಂದು ವೇಳೆ 3ನೇ ಮಹಾಯುದ್ಧ ನಡೆದರೂ ಅಚ್ಚರಿಯಿಲ್ಲ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪುಟಿನ್, ಆಧುನಿಕ ಕಾಲದಲ್ಲಿ ಎಲ್ಲಾ ಸಾಧ್ಯತೆಗಳು ತೆರೆದಿವೆ. 3ನೇ ಮಹಾಯುದ್ಧಕ್ಕೆ ಕೇವಲ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಆದರೆ ನಾವು ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಬದಲಾಗಿ ಅವರ ತಂತ್ರಗಳಿಗೆ ಪ್ರತಿತಂತ್ರ ನಮ್ಮಲ್ಲಿ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.