ನಿಮ್ಮ ಮೊಬೈಲ್ ನಿಂದ ಅಶ್ಲೀಲ ಚಿತ್ರಗಳನ್ನು ರವಾನೆ ಮಾಡಿದ್ದೀರಿ ಎಂಬ ಕಾರಣಕ್ಕೆ 48 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡ್ತೀವಿ ಎಂದು ಬೆದರಿಸಿ ಸೈಬರ್ ವಂಚಕರು ವೈದ್ಯೆಯಿಂದ 59 ಲಕ್ಷ ರೂ. ವಂಚಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾದ ಸೆಕ್ಟರ್ 77ರ ನಿವಾಸಿಯಾದ ಡಾ.ಪೂಜಾ ಗೋಯೆಲ್ ವಂಚನೆಗೊಳಗಾಗಿದ್ದಾರೆ. ಜುಲೈ 13ರಂದು ಕರೆ ಮಾಡಿದ ವ್ಯಕ್ತಿ ಕೇಂದ್ರ ಸರ್ಕಾರದ ದೂರವಾಣಿ ಪ್ರಾಧಿಕಾರದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು, ನಿಮ್ಮ ಫೋನ್ ಗಳ ಮೂಲಕ ಅಶ್ಲೀಲ ಸಂದೇಶಗಳು ರವಾನೆಯಾಗುತ್ತಿವೆ ಎಂದು ಹೇಳಿದ್ದಾನೆ.
ವೈದ್ಯೆ ಈ ಆರೋಪವನ್ನು ಅಲ್ಲಗಳೆದಿದ್ದಾಳೆ. ಆಗ ನಿಮ್ಮನ್ನು 48 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಲಾಗಿದ್ದು, ವೀಡಿಯೋ ಕಾಲ್ ಗೆ ಬನ್ನಿ ಎಂದು ಕರೆ ಮಾಡಿದ್ದಾನೆ. ವೀಡಿಯೋ ಕಾಲ್ ವೇಳೆ ವೈದ್ಯೆಯಿಂದ 59 ಲಕ್ಷದ 54 ಸಾವಿರ ಪಾವತಿಸಿಕೊಂಡಿದ್ದಾರೆ.
ಜುಲೈ 13ರಂದು ಈ ಘಟನೆ ನಡೆದಿದ್ದು, ತನಗೆ ವಂಚಿಸಲಾಗಿದೆ ಎಂದು ತಿಳಿದ ನಂತರ ವೈದ್ಯೆ ಜುಲೈ 22ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಡಿಜಿಟಲ್ ನಿಯಮಗಳ ಜಾರಿ ನೆಪದಲ್ಲಿ ಸೈಬರ್ ವಂಚಕರು ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಸೈಬರ್ ಅಪರಾಧ ಮಾಡಿದ್ದೀರಿ ಎಂದು ಹೆದರಿಸಿ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಚಂಡೀಗಢದ ವೃದ್ಧರೊಬ್ಬರನ್ನು 12 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದೀವಿ ಎಂದು ಕಾಡಿಸಿ 83 ಲಕ್ಷ ರೂ. ವಂಚಿಸಲಾಗಿದೆ.