ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ಅನಿದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಮೂಲಕ ನಿಗದಿತ ಅವಧಿಗೂ ಒಂದು ದಿನ ಮುನ್ನವೇ ಉಭಯ ಸದನಗಳ ಕಲಾಪ ಮುಕ್ತಾಯಗೊಂಡಿದೆ.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಬಹಿಷ್ಕಾರದ ನಡುವೆ ಮಂಗಳವಾರ ನೀಟ್ ಪರೀಕ್ಷೆ ವಿರೋಧಿಸಿ ನಿರ್ಣಯ ಸೇರಿದಂತೆ ಮೂರು ಮಸೂದೆಗಳಿಗೆ ರಾಜ್ಯ ಸರ್ಕಾರ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮುಡಾ ಅಕ್ರಮ ಮತ್ತು ವಾಲ್ಮೀಕಿ ನಿಗಮದ ಅಕ್ರಮಗಳ ಕುರಿತು ಚರ್ಚೆಗೆ ಅವಕಾಶ ಕೋರಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಹೋರಾತ್ರಿ ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಒಂದು ದಿನ ಅವಧಿಗೂ ಮುನ್ನವೇ ಕಲಾಪ ಮುಕ್ತಾಯಗೊಂಡಿತು.
ಉಭಯ ಸದನಗಳ ಕಲಾಪ ಒಂದು ದಿನ ಮುಂಚಿತವಾಗಿ ಮುಂದೂಡಿಕೆ ಆದ ಬೆನ್ನಲ್ಲೇ ಪ್ರತಿಪಕ್ಷಗಳ ಸದಸ್ಯರು ಮೆರವಣಿಗೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸರ್ಕಾರದ ವಿರುದ್ಧ ದೂರು ನೀಡಿದರು.