ಅಪಾರ್ಟ್ ಮೆಂಟ್ ಗಳಲ್ಲಿ ನಾಯಿ, ಬೆಕ್ಕು ಸಾಕುವುದಕ್ಕೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುತ್ತೋಲೆ ಹೊರಡಿಸಿದೆ.
ಅಪಾರ್ಟ್ಮೆಂಟ್ ಗಳಲ್ಲಿ ನಾಯಿ, ಬೆಕ್ಕು ಸಾಕಲು, ಲಿಫ್ಟ್ ನಲ್ಲಿ ಕರೆದುಕೊಂಡು ಹೋಗುವುದಕ್ಕೆ ನಾಯಿ ಬೊಗಳುವುದಕ್ಕೆ ಆಕ್ಷೇಪಿಸುವುದು ಸೇರಿದಂತೆ ಮೊದಲಾದ ನಿರ್ಬಂಧಗಳನ್ನು ಮನೆ ಮಾಲೀಕರಿಗೆ ವಿಧಿಸುವಂತಿಲ್ಲ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗ ಸೂಚನೆ ನೀಡಿದೆ.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಲಹೆ ಮೇರೆಗೆ ಅಪಾರ್ಟ್‌ಮೆಂಟ್ ಮತ್ತು ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳಿಗೆ ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದಕ್ಕೆ ನಿರ್ಬಂಧ ತೆರವುಗೊಳಿಸಿ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಆಧರಿಸಿ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದು, ಬೀದಿ ನಾಯಿಗಳಿಗೆ ಊಟ ಹಾಕುವವರಿಗೆ, ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್ ಮೆಂಟ್ ಮಾಲೀಕರ ಸಂಘ, ಶೈಕ್ಷಣಿಕ ಸಂಸ್ಥೆಗಳು, ಟೆಕ್ ಪಾರ್ಕ್ ಸಾರ್ವಜನಿಕ ಸಂಸ್ಥೆಗಳಿಗೆ ಬಿಬಿಎಂಪಿಯ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
ಬಿಬಿಎಂಪಿ ಮಾರ್ಗಸೂಚಿಯಲ್ಲಿರುವ ಪ್ರಮುಖ ಅಂಶಗಳು
ಸಾಕು ಪ್ರಾಣಿ ಕಾಯ್ದೆಗೆ ವಿರುದ್ದವಾಗಿ ಯಾವುದೇ ಬೈಲಾ ರೂಪಿಸುವಂತಿಲ್ಲ
ಪ್ರಾಣಿ ಪ್ರಿಯರಿಗೆ ಬೆಕ್ಕು, ನಾಯಿ ಸೇರಿದಂತೆ ಇತರೆ ಸಾಕು ಪ್ರಾಣಿ ಸಾಕುವುದಕ್ಕೆ ನಿಷೇಧ ಹೇರುವಂತಿಲ್ಲ
ಲಿಫ್ಟ್‌ಗಳಲ್ಲಿ ಸಾಕು ಪ್ರಾಣಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ
ಒಂದು ವೇಳೆ ನಿರಾಕಸಿದರೆ, ಪ್ರತ್ಯೇಕ ಲಿಫ್ಟ್ ವ್ಯವಸ್ಥೆ ಮಾಡಬೇಕು
ಸಾಕು ಪ್ರಾಣಿಗಳು ಆವರಣಕ್ಕೆ ಬಂದಾಗ ಕಡ್ಡಾಯವಾಗಿ ಮುಖವಾಡ ಹಾಕಬೇಕೆಂದು ನಿರ್ಬಂಧಿಸುವಂತಿಲ್ಲ
ನಾಯಿ ಮತ್ತು ಬೆಕ್ಕು ಬೊಗಳುವುದಕ್ಕೆ ನೆರೆ ಹೊರೆಯವರು ಆಕ್ಷೇಪಿಸುವಂತಿಲ್ಲ
ಅಗತ್ಯವಾದರೆ ಸಾಕು ಪ್ರಾಣಿಗಳ ಓಡಾಟಕ್ಕೆ ಬೆಳಗ್ಗೆ ಮತ್ತು ಸಂಜೆ ಸಮಯ ನಿಗದಿ ಪಡಿಸಿಕೊಳ್ಳಬಹುದು
ಅನಧಿಕೃತವಾಗಿ ಸಂತಾನೋತ್ಪತ್ತಿ ಕಂಡು ಬಂದರೆ, ನಾಯಿ ಕಚ್ಚಿದರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು