ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಟ್ಟಾರೆ ಸೋಂಕಿತ ಪ್ರಕರಣಗಳ ಸಂಖ್ಯೆ 16 ಸಾವಿರ ಗಡಿ ದಾಟಿದರೆ, ಸಾವಿನ ಸಂಖ್ಯೆ 10ಕ್ಕೇರಿದೆ.
ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 494 ಮಂದಿಯಲ್ಲಿ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಇದುವರೆಗೆ 16,038 ಡೆಂಘೀ ಪ್ರಕರಣಗಳು ವರದಿ ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,319ಕ್ಕೇರಿದೆ. ಇದರಲ್ಲಿ 2655 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 641 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 628 ಮಂದಿಗೆ ಸಾಮಾನ್ಯ ವಾರ್ಡ್ ನಲ್ಲಿ ಹಾಗೂ 13 ಮಂದಿಗೆ ಐಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಡೆಂಘೀ ಹಾವಳಿಗೆ ಇದುವರೆಗೆ 10 ಮಂದಿ ಬಲಿಯಾಗಿದ್ದು, ಕಳೆದ 24 ಗಂಟೆಯಲ್ಲಿ 1 ವರ್ಷದೊಳಗಿನ 20 ಮಕ್ಕಳಿಗೆ ಡೆಂಘೀ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದೊಳಗಿನ 287 ಮಕ್ಕಳಲ್ಲಿ ಡೆಂಘೀ ದೃಢಪಟ್ಟಿದ್ದು, ಒಂದು ವರ್ಷದಿಂದ 18 ವರ್ಷದೊಳಗಿನ 166 ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 7280 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 285 ಪ್ರಕರಣಗಳು ದೃಢಪಟ್ಟಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ ಗೆ ಇಲ್ಲಿಯವರೆಗೆ ಮೂರು ಬಲಿಯಾಗಿದ್ದಾರೆ.