ಬೆಂಗಳೂರಿನ ಕೋರಮಂಗಲದಲ್ಲಿರುವ ಪಿಜಿಯಲ್ಲಿ ಯುವತಿಯನ್ನು ಬರ್ಬರ ಹತ್ಯೆಗೆದು ಮಧ್ಯ ಪ್ರದೇಶದಲ್ಲಿ ಸಿಕ್ಕಿಬಿದ್ದ ವ್ಯಕ್ತಿ ವಿಚಾರಣೆ ವೇಳೆ ಸ್ಫೋಟಕ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಕೊಲೆಯಾದ ಯುವತಿಯ ಪ್ರಿಯಕರ ಎಂದು ಶಂಕಿಸಲಾಗಿತ್ತು. ಆದರೆ ವಿಚಾರಣೆ ವೇಳೆ ಹಾಸ್ಟೇಲ್ ನಲ್ಲಿ ಸಹಪಾಠಿ ಯುವತಿಯ ಪ್ರಿಯಕರ ಎಂಬುದು ತಿಳಿದು ಬಂದಿದೆ.
ಬಿಹಾರ ಮೂಲದ ಕೀರ್ತಿ ಕುಮಾರಿಯನ್ನು ಯುವಕ ಜುಲೈ 23ರಂದು ಕೋರಮಂಗಲದಲ್ಲಿರುವ ಹಾಸ್ಟೇಲ್ ಒಳಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದಿದ್ದ. ಕೊಲೆ ಮಾಡಿದ ವ್ಯಕ್ತಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದ್ದು, ಈತ ಕೊಲೆ ಮಾಡಿದ ಬೆನ್ನಲ್ಲೇ ಮಧ್ಯಪ್ರದೇಶಕ್ಕೆ ಪರಾರಿಯಾಗಿದ್ದ.
ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಪಿಜಿಗೆ ಯಾವುದೇ ಭದ್ರತೆ ಇಲ್ಲದ ಕಾರಣ ಹಾಸ್ಟೇಲ್ ಗೆ ನುಗ್ಗಿದ ಅಭಿಷೇಕ್ ಕೀರ್ತಿ ಕುಮಾರಿ ಕೊಠಡಿಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆಗೆಯುತ್ತಿದ್ದಂತೆ ಆಕೆಯನ್ನು ಎಳೆದೊಯ್ದು ಮೂಲೆಯೊಂದಲ್ಲಿ ಕತ್ತು ಸೀಳಿ ಕೊಲೆ ಮಾಡಿದ್ದ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕೊಲೆ ಮಾಡಿದ ಅಭಿಷೇಕ್ ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿತ್ತು. ಕೊಲೆಯಾದ ಯುವತಿ ಬಿಹಾರ ಮೂಲದ ಕೀರ್ತಿ ಕುಮಾರಿ ಪ್ರೇಮಿಗಳ ನಡುವಿನ ವೈಯಕ್ತಿಕ ವಿಷಯದಲ್ಲಿ ಮೂಗು ತೂರಿಸಿ ಸಂಬಂಧ ಹಾಳು ಮಾಡಲು ಯತ್ನಿಸಿದ್ದಕ್ಕಾಗಿ ಕೊಲೆಯಾಗಿದ್ದಾಳೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ.
ಕೀರ್ತಿ ಕುಮಾರಿ ರೂಮ್ ಮೇಟ್ ಯುವತಿಯ ಪ್ರಿಯಕರ ಅಭಿಷೇಕ್. ಅಭಿಷೇಕ್ ನಿರುದ್ಯೋಗಿ ಆಗಿದ್ದು, ಈ ವಿಷಯದಲ್ಲಿ ಅಭಿಷೇಕ್ ಮತ್ತು ಗೆಳತಿ ನಡುವೆ ಪದೇಪದೆ ಜಗಳ ಆಗುತ್ತಿತ್ತು. ಸಹಪಾಠಿ ಆಗಿದ್ದ ಕೀರ್ತಿ ಕುಮಾರಿ ಇಬ್ಬರ ಜಗಳದಲ್ಲಿ ಮೂಗು ತೂರಿಸಿದ್ದರಿಂದ ಗಲಾಟೆ ವಿಕೋಪಕ್ಕೆ ಹೋಗುತ್ತಿತ್ತು.
ಪ್ರೇಮಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಲು ಕೀರ್ತಿ ಕುಮಾರಿಯೇ ಕಾರಣ ಎಂದು ಅಭಿಷೇಕ್ ಅಸಮಾಧಾನಗೊಂಡಿದ್ದ. ಅಲ್ಲದೇ ಅಭಿಷೇಕ್ ಜೊತೆ ಗೆಳತಿ ಹಾಗೂ ಕೀರ್ತಿ ಕುಮಾರಿ ಇಬ್ಬರೂ ಮಾತನಾಡುವುದನ್ನು ನಿಲ್ಲಿಸಿದ್ದು, ಫೋನ್ ಕರೆ ಸ್ವೀಕರಿಸುತ್ತಿರಲಿಲ್ಲ.
ಗೆಳತಿಯ ರೂಮ್ ಬದಲಾವಣೆಗೆ ಕೂಡ ಒಮ್ಮೆ ಸಹಕರಿಸಿದ್ದ ಕೀರ್ತಿ ಕುಮಾರಿಯನ್ನು ಗೆಳತಿ ಹೆಚ್ಚು ನಂಬುತ್ತಿದ್ದಳು. ಅವಳ ಮಾತಿನಂತೆ ನಡೆಯುತ್ತಿದ್ದಾಳೆ ಎಂದು ಅಸಮಾಧಾನಗೊಂಡ ಅಭಿಷೇಕ್ ಸಂಬಂಧ ಹಾಳು ಮಾಡಿದ ಸಿಟ್ಟಿಗೆ ಕೀರ್ತಿ ಕುಮಾರಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಯಾನಕ ಘಟನೆಯನ್ನು ಯುವತಿಯನ್ನು ನೋಡಿದರೂ ಯಾರೂ ರಕ್ಷಣೆಗೆ ಬಂದಿರಲಿಲ್ಲ. ಅಲ್ಲದೇ ಪಿಜಿಯಲ್ಲಿ ಭದ್ರತಾ ವ್ಯವಸ್ಥೆ ಮಾಡದೇ ಇರುವುದು ಮಾಲೀಕನ ತಪ್ಪು ಎಂದು ಪೊಲೀಸರು ತಿಳಿಸಿದ್ದಾರೆ.