ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಪಣ ತೊಟ್ಟಿರುವ ರಾಜ್ಯ ಸರ್ಕಾರ ಇದಗೀ ಬಾನೆತ್ತರದಿಂದ ಬೆಂಗಳೂರು ವೀಕ್ಷಿಸಲು ಅನುಕೂಲ ಮಾಡಿಕೊಡುವ ವೀಕ್ಷಣಾ ಗೋಪುರ (ಸ್ಕೈ ಡೆಕ್) ನಿರ್ಮಾಣಕ್ಕೆ 500 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶನಿವಾರ ಬೆಂಗಳೂರಿನ ಶಾಸಕರ ಜೊತೆ ನಡೆದ ಸಭೆಯಲ್ಲಿ ಹಲವು ವರ್ಷಗಳಿಂದ ಪ್ರಸ್ತಾಪನೆ ಹಂತದಲ್ಲಿಯೇ ಇರುವ ಸ್ಕೈ ಡೆಕ್ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ನೈಸ್ ರಸ್ತೆಯಲ್ಲಿ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಸ್ಕೈ ಡೆಕ್ ಅಲ್ಲದೇ ಸುರಂಗ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ. ಮೊದಲ ಹಂತದಲ್ಲಿ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗಿನ 18.5 ಕಿ.ಮೀ. ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಯಿತು.
ಪೂರ್ವ-ಪಶ್ಚಿಮ ಭಾಗದಲ್ಲಿ 2ನೇ ಹಂತದಲ್ಲಿ ಮತ್ತೊಂದು ಸುರಂಗ ರಸ್ತೆ ನಿರ್ಮಿಸಲು ಚರ್ಚೆಯೂ ಸಹ ನಡೆದಿದೆ. ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗಕ್ಕಾಗಿ ಭೂಸ್ವಾಧೀನ ಬದಲಿಗೆ ಡಬಲ್ ಡಕ್ಕರ್ ರಸ್ತೆಗಳನ್ನ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತದೆ. ಪಾಲಿಕೆ ಮತ್ತು ಮೆಟ್ರೋದವರೇ ಈ ಪ್ರಾಜೆಕ್ಟ್ ಗೆ ಹಣ ಖರ್ಚು ಮಾಡಲಿವೆ.
ಸಿಗ್ನಲ್ ಫ್ರೀ ಕಾರಿಡಾರ್‌ಗೆ 100 ಕಿಮೀ ಫ್ಲೈಓವರ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಫ್ಲೈಓವರ್ ನಿರ್ಮಾಣಕ್ಕೆ 12 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತೆ. ಕಸ ಸಮಸ್ಯೆ ನಿವಾರಣೆಗೆ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ 4 ಜಾಗ ಗುರುತಿಸಲಾಗಿದೆ. ಪ್ರತಿ ಭಾಗದಲ್ಲಿ 100 ಎಕರೆ ಜಾಗದಲ್ಲಿ ಕಸ ಡಂಪಿಂಗ್ ಮಾಡುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.