ರಾಜ್ಯದಲ್ಲಿ ಬರಗಾಲ ಬಂದು ಐದು ತಿಂಗಳಾಯ್ತು. ಪ್ರಧಾನಿ ಮೋದಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ. ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂದು ಹೇಳುವ ಪ್ರಧಾನಿ ಮೋದಿ, ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಯ ನೆರವಿಗೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
18,171 ಕೋಟಿ ಬರ ಪರಿಹಾರ ಹಣ ಕೇಳಿದ್ವಿ . ಒಂದು ರೂಪಾಯಿಯನ್ನೂ ಕೊಡಲಿಲ್ಲ, 48 ಸಾವಿರ ಹೆಕ್ಟೇರ್ ನಲ್ಲಿ ಬೆಳೆ ಹಾನಿ ಆಗಿದೆ. ಬರ ಪರಿಹಾರ ಕೊಡಿ ಅಂದ್ವಿ ಕೊಡಲಿಲ್ಲ. ಮತ್ತೆ ಮೋದಿಯವರಿಗೆ “ನಮ್ಮಲ್ಲಿ ಹಣ ಇಲ್ಲ” ಎಂದು ಆರೋಪಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಕೇಂದ್ರದಿಂದ ನಯಾಪೈಸೆ ಬರದಿದ್ದರೂ ನಾವು ರಾಜ್ಯ ಬೊಕ್ಕಸದಿಂದಲೇ ರೈತರ ಖಾತೆಗೆ ಬರ ಪರಿಹಾರ ಹಾಕಿದ್ದೇವೆ. ಬರಗಾಲದಲ್ಲಿ ನರೇಗಾ ದಿನಗಳನ್ನು ಹೆಚ್ಚಿಸಿ ಎಂದು ಕೇಳಿದ್ವಿ. ಇವತ್ತಿನವರೆಗೂ ಮಾಡಿಲ್ಲ. ಕೇಂದ್ರ ಸರ್ಕಾರ ಅಂದರೆ ಕೇವಲ GST ತಗೊಳೋಕೆ, ತೆರಿಗೆ ಸಂಗ್ರಹಿಸಿ ತಮ್ಮಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಅನ್ಯಾಯ ಮಾಡೋಕೆ ಮಾತ್ರ ಇರೋದಾ ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ, ಅವರು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ. ಜನರ ಕೆಲಸ ಮಾಡಿದ್ದೇವೆ. ಜನರ ಭಾವನೆಗಳನ್ನು ಕೆರಳಿಸಿ ಅವರಿಗೆ ದ್ರೋಹ ಆಗಿಲ್ಲ. ಹೀಗಾಗಿ ನಾವು ಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.