ಆನ್ ಲೈನ್ ಚಟಕ್ಕೆ ಬಿದ್ದಿದ್ದ 16 ವರ್ಷದ ಬಾಲಕ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪಂಪ್ರಿ ಚಿಂಚ್ವಾಡ್ ಬಡಾವಣೆಯ ಅಪಾರ್ಟ್ ಮೆಂಟ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಲಕ ನೋಟ್ ಬುಕ್ ನಲ್ಲಿ ಲಾಗೌಟ್ ಎಂದು ಬರೆದಿದ್ದಾರೆ. ಇದು ಆತ್ಮಹತ್ಯೆ ಮಾಡಿಕೊಂಡಿರುವ ಸುಳಿವು ಎಂದು ಪೊಲೀಸರು ತಿಳಿಸಿದ್ದಾರೆ.
ಮಗ ಆನ್ ಲೈನ್ ಗೇಮ್ ನಲ್ಲಿ ಯಾವಾಗಲೂ ಇರುತ್ತಿದ್ದ ಎಂದು ಪೋಷಕರು ಹೇಳಿದ್ದಾರೆ. ಅಲ್ಲದೇ ನೋಟ್ ಬುಕ್ ನಲ್ಲಿ ಮತ್ತೊಂದು ಕಡೆ ಎಕ್ಸ್ ಡಿ ಎಂದು ಬರೆದಿದ್ದು, ಇದು ಆನ್ ಲೈನ್ ನಲ್ಲಿ ಬಳಸುವ ಕೋಡ್ ಆಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆ ನೈಜಿರಿಯಾದಲ್ಲಿ ಉದ್ಯೋಗದ ಮೇಲೆ ತೆರಳಿದ್ದರೆ, ತಾಯಿ ಇಂಜಿನಿಯರ್ ಆಗಿದ್ದು ಹೋಮ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಬಾಲಕನ ಮನೆಯಿಂದ ಲ್ಯಾಪ್ ಟಾಪ್ ವಶಪಡಿಸಿಕೊಂಡಿರುವ ಪೊಲೀಸರು ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ನೋಟ್ ಬುಕ್ ನಲ್ಲಿ ಲಾಗೌಟ್ ಎಂದು ಬರೆದಿರುವುದೂ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ಬರೆದಿದ್ದು, ಕಟ್ಟಡದ ಚಿತ್ರವನ್ನು ಬರೆದಿದ್ದಾರೆ.