ಬೆಳಗ್ಗೆ ಕುಡಿಯುವ ಟೀಯನ್ನು ಒಮ್ಮೆ ಬದಲಾಯಿಸಿ ನೋಡಿ, ಏಕೆಂದರೆ ಮಾಮೂಲಿ ಟೀ-ಕಾಫಿಗೆ ಹೋಲಿಸಿದರೆ ಇತರ ಗಿಡಮೂಲಿಕೆ ಸತ್ವಗಳ ಟೀ ಆರೋಗ್ಯಕ್ಕೆ ಬಹಳ ಬಳ್ಳೆಯದು. ಸಕ್ಕರೆ ಹಾಕದೆ ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಗ್ರೀನ್ ಟೀ ಅತ್ಯುತ್ತಮ. ಇದರಲ್ಲಿ ನೈಸರ್ಗಿಕ ಆಯಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಕ್ಯಾಲೋರಿ ಕಡಿಮೆ ಇರುವುದರಿಂದ ದೇಹದ ತೂಕ ಇಳಿಸಲು ಸಹಕಾರಿ.
ಪುದೀನಾ ಚಹಾ ಕೂಡ ದೇಹದ ಆರೋಗ್ಯಕ್ಕೆ ಒಳ್ಳೆಯದು. ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಇರುವುದರಿಂದ ದೇಹದ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿ ಕೊಂಡು ಪದೇ ಪದೆ ತಿನ್ನುವ ಆಸೆಯನ್ನು ತಡೆಯೊಡ್ಡುತ್ತದೆ. ಸಿಹಿ ಪದಾರ್ಥ ಸೇವನೆಗೂ ತಡೆಯಾಗುತ್ತದೆ.
ಪುದೀನಾ ಟೀ ಹೀಗೆ ಮಾಡಿ
ಒಂದು ಲೋಟ ಕುದಿಯುವ ನೀರಿಗೆ 2 ಟೇಬಲ್ ಚಮಚ ಆಗುವಷ್ಟು ಒಣಗಿದ ಪುದೀನಾ ಎಲೆಗಳನ್ನು ಹಾಕಿ, ಹತ್ತು ನಿಮಿಷಗಳವರೆಗೆ ಕುದಿಸಿ ಪಾತ್ರೆಗೆ ಸೋಸಿಕೊಳ್ಳಿ. ಸಕ್ಕರೆ ಬೆರೆಸಬೇಡಿ. ರುಚಿಗಾಗಿ ಅರ್ಧ ಚಮಚ ಜೇನುತುಪ್ಪವನ್ನು ಬೆರಸಿ, ಉಗುರು ಬೆಚ್ಚಗೆ ಇರುವಾಗ ಕುಡಿಯಿರಿ.
ಚಕ್ಕೆ ಚಹಾ ಅಪಾರ ಔಷಧೀಯ ಗುಣ ಲಕ್ಷಣಗಳನ್ನು ಒಳಗೊಂಡಿದೆ. ಆಂಟಿ ಆಕ್ಸಿಡೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿ ಇವೆ. ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಹೊಟ್ಟೆಯ ಭಾಗದ ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಚಕ್ಕೆ ಚಹಾ ಹೀಗೆ ಮಾಡಿ
ಹಿಡಿಯಷ್ಟು ದಾಲ್ಚಿನ್ನಿ ಚೆಕ್ಕೆಗಳನ್ನು ಪುಡಿ ಮಾಡಿಕೊಳ್ಳಿ, ಎರಡು ಲೋಟ ನೀರನ್ನು ಕುದಿಯಲು ಬಿಟ್ಟು, ಸ್ವಲ್ಪ ಟೀ ಪೌಡರ್ ಹಾಗೂ ಪುಡಿಮಾಡಿಕೊಂಡ ದಾಲ್ಚಿನ್ನಿ ಚೆಕ್ಕೆಗಳನ್ನು ಹಾಕಿ ಕುದಿಸಿ. ಎರಡು ಮೂರು ನಿಮಿಷ ಕುದಿದ ಬಳಿಕ ಸ್ವಲ್ಪ ಹಾಲನ್ನು ಹಾಕಿ ಕುದಿಸಿದ ಬಳಿಕ ಸೋಸಿಕೊಂಡು ಉಗುರು ಬೆಚ್ಚಗೆ ಇರುವಾಗಲೇ ಕುಡಿಯಬೇಕು.