Thursday, September 19, 2024
Google search engine
Homeತಾಜಾ ಸುದ್ದಿವಿಜಯೇಂದ್ರ ಆದ್ಯತೆಗೆ ಅಸಮಾಧಾನ: 2ನೇ ದಿನದ ಪಾದಯಾತ್ರೆಯಿಂದ ಮುಖಂಡರು ನಾಪತ್ತೆ!

ವಿಜಯೇಂದ್ರ ಆದ್ಯತೆಗೆ ಅಸಮಾಧಾನ: 2ನೇ ದಿನದ ಪಾದಯಾತ್ರೆಯಿಂದ ಮುಖಂಡರು ನಾಪತ್ತೆ!

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿ ನಡೆಸುತ್ತಿರುವ ಪಾದಯಾತ್ರೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನಡೆಯಿಂದ ಕುಗ್ಗಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾದರೆ, ಎರಡೂ ಪಕ್ಷಗಳ ಮುಖಂಡರಲ್ಲಿ ಒಳಗೊಳಗೇ ಬೇಗುದಿ ಶುರುವಾಗಿದೆ.

ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚಿದೆ. ಈ ಭಾಗದಲ್ಲಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದ್ದರಿಂದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಂತರ ಪಾದಯಾತ್ರೆ ಉದ್ಘಾಟನೆಯಲ್ಲಿ ಕಾಣಿಸಿಕೊಂಡರೂ ನಂತರ ನಾಪತ್ತೆಯಾದರು.

ಜೆಡಿಎಸ್ ಪಕ್ಷದ ಮುಖಂಡರಾದ ಜಿಟಿ ದೇವೇಗೌಡ ಸೇರಿದಂತೆ ಹಲವು ಮುಖಂಡರು ಪಾದಯಾತ್ರೆ ವೇಳೆ ಮೂಲೆಗುಂಪಾದರೆ, ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಾತ್ರ ಪಾದಯಾತ್ರೆಯಲ್ಲಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಮಾತ್ರ ಹೈಲೇಟ್ ಆಗುತ್ತಿರುವುದರಿಂದ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಎರಡನೇ ದಿನ ಕಣ್ಮರೆಯಾಗಿದ್ದಾರೆ. ಕೊಪ್ಪಳದಲ್ಲಿ ಅನುಮಾಸ್ಪದವಾಗಿ ಮೃತಪಟ್ಟ ಪಿಎಸ್ ಐ ಪರಮೇಶ್ವರ್ ಕುಟುಂಬ ಭೇಟಿ ನೆಪದಲ್ಲಿ ಪಾದಯಾತ್ರೆಯಿಂದ ನುಣುಚಿಕೊಂಡಿದ್ದಾರೆ. ಮತ್ತೊಂದೆಡೆ ವಿಧಾನಪರಿಷತ್ ಪ್ರತಿಪಕ್ಷ ನಾಯಕನಾಗಿರುವ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ, ರವಿಕುಮಾರ್ ಸೇರಿದಂತೆ ಹಲವು ನಾಯಕರು ಎರಡನೇ ದಿನವೇ ನಾಪತ್ತೆಯಾಗಿದ್ದಾರೆ.

ಮೈಸೂರು ಭಾಗದ ಸಂಸದ ಯಧುವೀರ್ ಒಡೆಯರ್, ಟಿಕೆಟ್ ವಂಚಿತ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ನಾರಾಯಣಸ್ವಾಮಿ, ಸುಮಲತಾ ಅಂಬರೀಷ್ ಕಾಣಿಸಿಕೊಂಡಿಲ್ಲ. ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಂತಾದವರು ಪಾಲ್ಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಪಾದಯಾತ್ರೆ ನೆಪ ಮಾಡಿಕೊಂಡು ರಾಜ್ಯಪಾಲರ ಮೂಲಕ ಸರ್ಕಾರ ಪತನಗೊಳಿಸಿದರೆ ಜನರ ವಿಶ್ವಾಸ ಪಡೆಯುವುದು ಉದ್ದೇಶವಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದರೆ ಪಾದಯಾತ್ರೆ ವಿಜಯೇಂದ್ರ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮಾಡಿರುವ ಪ್ರಯತ್ನ, ಇದರಲ್ಲಿ ನಾವು ಯಾಕೆ ಪಾಲ್ಗೊಳ್ಳಬೇಕು ಎಂದು ಇತರೆ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments