ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬ ನಾವು ಮಣ್ಣಿನ ಮಕ್ಕಳು, ಉದ್ಯಮಿಗಳಲ್ಲ ಅಂತ ಹೇಳುತ್ತಾರೆ. ಹಾಗಾದರೆ ಸಾವಿರಾರು ಕೋಟಿ ಆಸ್ತಿ ಆಲೂಗಡ್ಡೆ, ಈರುಳ್ಳಿ ಬೆಳೆದು ಸಂಪಾದಿಸಿದ್ದಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಚನ್ನಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಹಮ್ಮಿಕೊಂಡಿರುವ ಪಾದಯಾತ್ರೆ, ಎರಡೂ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಮಾಡಿದ ಭ್ರಷ್ಟಾಚಾರದ ಪಾಪವಿಮೋಚನಾ ಯಾತ್ರೆ ಆಗಿದೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆ ಭ್ರಷ್ಟಾಚಾರಕ್ಕಾಗಿ ಭ್ರಷ್ಟಾಚಾರದಿಂದ ಮತ್ತು ಭ್ರಷ್ಟಾಚಾರಕ್ಕೋಸ್ಕರ ಎಂದು ಲೇವಡಿ ಮಾಡಿದರು.
ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಅವರು ನಾನು ಮಣ್ಣಿನ ಮಗ, ರೈತನ ಮಗ ಅಂತ ಹೇಳಿಕೊಳ್ಳುತ್ತಾರೆ. ನಾನು ಉದ್ಯಮಿ ಅಲ್ಲ ಅಂತಾರೆ. ಹಾಗಾದರೆ ಅವರು ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡೆಯ ಹೇಗಾದರು? ಅವರ ಆದಾಯದ ಮೂಲ ಯಾವುದು? ಆಲೂಗಡ್ಡೆ, ಈರುಳ್ಳಿ ಬೆಳೆದು ಸಂಪಾದಿಸಿದ್ದಾ ಎಂದು ಪ್ರಶ್ನಿಸಿದರು.
ದೇಶದಲ್ಲಿ ರೈತರ ಪರಿಸ್ಥಿತಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹದ ಸಂದರ್ಭದಲ್ಲಿ ಕುಮಾರಸ್ವಾಮಿ ಕೃಷಿ ಮಾಡಿ ಸಾವಿರಾರು ಕೋಟಿ ರೂಪಾಯಿ ಸಂಪಾದನೆ ಮಾಡಲು ಸಾಧ್ಯವೇ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಕುಮಾರಸ್ವಾಮಿ ಅವರೇ ನೀವು ನನ್ನ ಮೂಲದಿಂದ ಹಿಡಿದು ಇಲ್ಲಿಯವರೆಗೆ ನಾನು ಸಂಪಾದಿಸಿದ್ದರ ಬಗ್ಗೆ ಚರ್ಚೆಗೆ ಬರಬಹುದು. ನಿಮ್ಮ ಸೋದರ ಎಚ್.ಡಿ. ಬಾಲಕೃಷ್ಣ ಗೌಡ ನಿವೃತ್ತ ಐಎಎಸ್ ಅಧಿಕಾರಿ. ಬಾಲಕೃಷ್ಣ ಗೌಡ, ಪತ್ನಿ ಮತ್ತು ಅವರ ಕುಟುಂಬ ಮೈಸೂರಿನಲ್ಲಿದೆ. ಇವರ ಹೆಸರಿನಲ್ಲಿ ಎಷ್ಟು ಬೇನಾಮಿ ಆಸ್ತಿ ಇದೆ ಗೊತ್ತಾ? ಒಬ್ಬ ಸರ್ಕಾರಿ ನೌಕರನ ಹೆಸರಿನಲ್ಲಿ ಸಾವಿರಾರು ಕೋಟಿ ಆಸ್ತಿ ಹೇಗೆ ಬಂದಿತು ಎಂದು ಅವರು ಪ್ರಶ್ನಿಸಿದರು.
ಶೀಘ್ರದಲ್ಲೇ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಆಸ್ತಿ ವಿವರನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ಜನ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಪತನಗೊಳಿಸಲು ನೀವು ಮಾಡುತ್ತಿರುವ ಪ್ರಯತ್ನವನ್ನು ಜನ ನೋಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.