ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಶಾಸಕನಿಗೂ ಬಿಜೆಪಿಯವರು ಆಪರೇಷನ್ ಕಮಲ ಮಾಡಲು 50 ಕೋಟಿ ರೂ. ಆಫರ್ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿ ಭ್ರಷ್ಟಾಚಾರದ ಪಿತಾಮಹ ಆಗಿರುವ ಬಿಜೆಪಿಯವರು ಮತ್ತೆ ಆಪರೇಷನ್ ಕಮಲ ಮಾಡುತ್ತಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬೀಳಿಸಲು ಪ್ರಯತ್ನ ಆರಂಭಿಸಿದ್ದಾರೆ ಎಂದರು.
ಒಬ್ಬೊಬ್ಬ ಶಾಸಕರಿಗೆ 50 ಕೋಟಿ ಆಫರ್ ಮಾಡ್ತಾರೆ. ನಾವೇ ಎಲೆಕ್ಷನ್ ಮಾಡಿಕೊಳ್ಳುತ್ತೇವೆ ಬನ್ನಿ ಅಂತಾರೆ. ಯಾವ ಹಣ ಇದು, ಬ್ಲಾಕ್ ಮನಿ ಅಲ್ವ? ಇಂತಹ ಭ್ರಷ್ಟರ ಪಕ್ಷ ಪ್ರತಿಪಕ್ಷಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಸೋಲಿನ ಭೀತಿ ಶುರುವಾಗಿದೆ, ಭೀತಿಯಿಂದ ರಾಜಕೀಯ ಪಕ್ಷಗಳ ನಿಷ್ಕ್ರೀಯಗೊಳಿಸುವ ಕೆಲಸ. ಬಿಜೆಪಿ ಖಾತೆಗೆ ಎಷ್ಟು ಹಣ ಬಂದಿದೆ, ಅವರ ಖಾತೆಯನ್ನೂ ಸೀಜ್ ಮಾಡಬೇಕಲ್ವ? ಶ್ರೀಮಂತರೆಲ್ಲಾ ವಿಪಕ್ಷಗಳಲ್ಲೇ ಇದ್ದಾರಾ? ಬಿಜೆಪಿಯಲ್ಲಿ ಯಾರೂ ಇಲ್ವ ಎಂದು ಅವರು ಮರುಪ್ರಶ್ನೆ ಹಾಕಿದರು.
ಜನತೆಯ ಅಭಿಪ್ರಾಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಅವರಿಗೆ ಸೋಲುವ ಭೀತಿ ಶುರುವಾಗಿದೆ. ಸೋಲಿನ ಭೀತಿಯಿಂದ ಪಕ್ಷದ ಖಾತೆಗಳನ್ನ ಸ್ಥಗಿತಮಾಡಿದ್ದಾರೆ. ಬಿಜೆಪಿಯವರಿಗೂ ಫಂಡ್ ಬಂದಿದೆ, ಅವರ ಖಾತೆಗೆಳನ್ನ ಯಾಕೆ ಸ್ಥಗಿತ ಮಾಡಿಲ್ಲ. ಇಡಿ, ಐಟಿ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡುತ್ತವೆ. ಸಂಸದೀಯ ವ್ಯವಸ್ಥೆಯನ್ನು ಬಿಜೆಪಿ ನಾಶ ಮಾಡುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಎಷ್ಟು ದಿನ ಹೇಳಲು ಸಾಧ್ಯ? ಎಂದರು.