ಮಾಜಿ ವಿಶ್ವ ಚಾಂಪಿಯನ್ ಭಾರತದ ವಿನೇಶ್ ಪೊಗತ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸುವ ಈ ಸಾಧನೆ ಮಾಡಿದ ಮೊದಲ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ಬರೆದಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ 50 ಕೆಜಿ ವಿಭಾಗದ ಫ್ರೀಸ್ಟೈಲ್ ಸೆಮಿಫೈನಲ್ ನಲ್ಲಿ ವಿನೇಶ್ ಪೊಗತ್ 5-0 ಅಂಕಗಳಿಂದ ಕ್ಯೂಬಾದ ಯುಸ್ನೆಲಿಯಸ್ ಗುಜ್ಮನ್ ಲೊಪೆಜ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು. ಈ ಮೂಲಕ ಭಾರತಕ್ಕೆ ಕುಸ್ತಿಯಲ್ಲಿ ಈ ಬಾರಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ.
ಗುಜ್ಮನ್ ಲೊಪೆಜ್ ಪ್ಯಾನ್ ಅಮೆರಿಕ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. ಅಲ್ಲದೇ ಸೆಂಟ್ರಲ್ ಅಮೆರಿಕ ಮತ್ತು ಕೆರಿಬಿಯನ್ ಗೇಮ್ಸ್ ಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಸೇರಿದಂತೆ 3 ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ನಡೆದ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ವಿನೇಶ್ ಪೋಗತ್ ಸತತ 82 ಪಂದ್ಯಗಳಲ್ಲಿ ಗೆದ್ದು ಅಜೇಯರಾಗಿದ್ದ ಜಪಾನ್ ನ ಯೂ ಸುಸಾಕಿ ಅವರನ್ನು ಸೋಲಿಸಿದ್ದರು. ಈ ಮೂಲಕ ಸತತ ಗೆಲುವಿನ ಕೊಂಡಿ ಕಳಚಿದ ಆಘಾತಕ್ಕೆ ಸುಸಾಕಿ ಒಳಗಾದರು.
ಯೂ ಸುಸಾಕಿ ಸೋಲಿಯದ ಕುಸ್ತಿಪಟುವಾಗಿದ್ದು ಒಲಿಂಪಿಕ್ ಚಾಂಪಿಯನ್, ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಅವರ ವಿರುದ್ಧದ ಹೋರಾಟದಲ್ಲಿ 29 ವರ್ಷದ ವಿನೇಶ್ ಪೊಗತ್ ಕೊನೆಯ ಕ್ಷಣದಲ್ಲಿ ಚಿಗರೆಯಂತೆ ಬಿದ್ದು 3-2ರಿಂದ ರೋಚಕ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದರು.
ಒಲಿಂಪಿಕ್ಸ್ ನಲ್ಲಿ ಇದುವರೆಗೆ ಹಾಕಿ ನಂತರ ಭಾರತಕ್ಕೆ ಅತೀ ಹೆಚ್ಚು ಪದಕ ಬಂದಿರುವುದು ಕುಸ್ತಿಯಲ್ಲಿ. ಕುಸ್ತಿಯಲ್ಲಿ ಇದುವರೆಗೆ 7 ಪದಕಗಳು ಬಂದಿದ್ದವು.
ಕೆಡಿ ಜಾಧವ್ (ಪುರುಷರ 52 ಕೆಜಿ ವಿಭಾಗ), ಸುಶೀಲ್ ಕುಮಾರ್ ಕಂಚು (ಪುರುಷರ 66 ಕೆಜಿ ವಿಭಾಗ, 2008 ಬೀಜಿಂಗ್ ಒಲಿಂಪಿಕ್ಸ್ ಮತ್ತು ಬೆಳ್ಳಿ 66 ಕೆಜಿ ವಿಭಾಗ 2012 ಲಂಡನ್ ಒಲಿಂಪಿಕ್ಸ್), ಯೋಗೇಶ್ವರ್ ದತ್ (ಕಂಚು, 60ಕೆಜಿ, 2012 ಲಂಡನ್), ಸಾಕ್ಷಿ ಮಲಿಕ್ (ಮಹಿಳಾ ವಿಭಾಗದ 58ಕೆಜಿ 2016ರಿಯೊ ಒಲಿಂಪಿಕ್ಸ್), ರವಿ ಕುಮಾರ್ ದಾಹಿಯಾ (57 ಕೆಜಿ 2020ರ ಟೊಕಿಯೊ ಒಲಿಂಪಿಕ್ಸ್), ಭಜರಂಗ್ ಪೂನಿಯಾ (ಕಂಚು, 65 ಕೆಜಿ ವಿಭಾಗ, 2020 ಟೊಕಿಯೊ ಒಲಿಂಪಿಕ್ಸ್).