ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಗ್ರೂಪ್-ಎ ನ 650 ಸಹಾಯಕ ಪ್ರಾಧ್ಯಾಪಕರು ಮತ್ತು 1200 ನರ್ಸ್‌ಗಳನ್ನು (ದಾದಿಯರು) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ಮಾಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಸಿದ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ಪರ್ಧಾತಕ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಿಕೊಳ್ಳಬೇಕೆಂದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಸಹಾಯಕ ಪ್ರಾಧ್ಯಾಪಕರು ಹಾಗೂ ನರ್ಸ್‌ಗಳ ನೇಮಕಾತಿ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪದ ನಡುವೆ ವೈದ್ಯಕೀಯ ಕಾಲೇಜು ಸಂಸ್ಥೆಗಳ ಮುಖ್ಯಸ್ಥರು ನೇಮಕಾತಿ ನಡೆಸುತ್ತಿದ್ದ ಪ್ರಸ್ತುತ ನೇಮಕಾತಿ ಪ್ರಕ್ರಿಯೆಯಿಂದ ತೃಪ್ತರಾಗದ ಸಚಿವರು, ಮುಂಬರುವ ಗ್ರೂಪ್-ಎ ಮತ್ತು ದಾದಿಯರ ನೇಮಕಾತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಿಕೊಳ್ಳಬೇಕೆಂದು ಪಾಟೀಲ್ ನಿರ್ದೇಶನ ನೀಡಿದರು.
ರಾಜ್ಯಾದ್ಯಂತ 22 ವೈದ್ಯಕೀಯ ಕಾಲೇಜುಗಳು ಮತ್ತು 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುತ್ತಿವೆ. ಈ ಹುದ್ದೆಗಳನ್ನು ನಿಯಮದಂತೆ ಯಾವುದೇ ಮುಲಾಜಿಗೊಳಗಾಗದೇ ಭರ್ತಿ ಮಾಡಬೇಕೆಂದು ಸಚಿವರು ತಾಕೀತು ಮಾಡಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಖಾಲಿ ಇರುವ ಹ್ದುೆಗಳಿಗೆ ಪರೀಕ್ಷೆಗಳನ್ನು ನಡೆಸಲು ಕೆಇಎಗೆ ಅಗತ್ಯವಾದ ಸಹಕಾರ ನೀಡಬೇಕು ಜೊತೆಗೆ ಇಲಾಖೆಯ ನೇಮಕಾತಿ ಬೈಲಾಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಪಾಟೀಲ್ ಹೇಳಿದರು.
ಕೆಇಎ ಮೂಲಕ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸರಕಾರ ಕಳೆದೆರಡು ವರ್ಷಗಳ ಹಿಂದೆಯೇ ಕಳುಹಿಸಿತ್ತು. ಆದಾಗ್ಯೂ, ಸರಿಯಾದ ಸಿ ಅಂಡ್ ಆರ್ ನಿಯಮಗಳು, ರೋಸ್ಟರ್ ಸಿಸ್ಟಮ್ ಇಲ್ಲದಿದ್ದಲ್ಲಿ ಪರೀಕ್ಷೆಯನ್ನು ನಡೆಸುವುದು ಕಷ್ಟ ಎಂದು ಕೆಇಎ ಉತ್ತರಿಸಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ದಾದಿಯರ ನೇಮಕಾತಿಗೆ ಅನ್ವಯವಾಗುವ ಸಿ ಮತ್ತು ಆರ್ ನಿಯಮಗಳನ್ನು ಅನುಸರಿಸುವಂತೆ ಸಚಿವರು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಜಂಟಿ ಕಾರ್ಯದರ್ಶಿಗೆ ಸೂಚಿಸಿದರು.
ನೇಮಕಾತಿ ನಿಲುವಳಿಯನ್ನು ಕೆಇಎಗೆ ಹಸ್ತಾಂತರಿಸುವ ಸುಗಮ ಪ್ರಕ್ರಿಯೆಗಾಗಿ, ಪರೀಕ್ಷೆಗಳನ್ನು ನಡೆಸಲು ಕೆಇಎಗೆ ಪಠ್ಯಕ್ರಮಕ್ಕಾಗಿ ತಜ್ಞರ ಸಮಿತಿಯನ್ನು ರಚಿಸುವಂತೆ ಸಚಿವರು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಅವರಿಗೆ ಸೂಚಿಸಿದರು.