Thursday, September 19, 2024
Google search engine
Homeತಾಜಾ ಸುದ್ದಿಬೆಂಗಳೂರಿನಲ್ಲಿ ಅರಣ್ಯ ಒತ್ತುವರಿ: ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಕೇಸು ದಾಖಲು!

ಬೆಂಗಳೂರಿನಲ್ಲಿ ಅರಣ್ಯ ಒತ್ತುವರಿ: ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಕೇಸು ದಾಖಲು!

ರಾಜ್ಯ ರಾಜಧಾನಿಯಲ್ಲಿ ಒತ್ತುವರಿ ತೆರವು ಮಾಡಿಸಲಾದ ಸುಮಾರು 500 ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯಲ್ಲಿ ವೃಕ್ಷೋಧ್ಯಾನ ಮತ್ತು ಪಕ್ಷಿಲೋಕ (Bird aviary) ನಿರ್ಮಿಸಲು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಭೂಮಿಪೂಜೆ ನೆರವೇರಿಸಿದ್ದಾರೆ.

ಇಲಾಖೆ ಮರುವಶ ಪಡಿಸಿಕೊಂಡಿರುವ 17 ಎಕರೆ ಜಮೀನಿನ ಖುದ್ದು ಪರಿಶೀಲನೆಗೆ ಬುಧವಾರ ಆಗಮಿಸಿದ್ದ ಸಚಿವರು, ಗಿಡ ನೆಡುವ ಮೂಲಕ ವೃಕ್ಷೋಧ್ಯಾನದಲ್ಲಿ 1800 ಸ್ಥಳೀಯ ಪ್ರಭೇದದ ಸಸಿ ನೆಡುವ ಕಾರ್ಯಕ್ರಮಕ್ಕೆ ಹಾಗೂ ಜಮೀನಿನ ಸುತ್ತಲೂ ತಂತಿ ಬೇಲಿ ಹಾಕುವ ಕಾಮಗಾರಿಗೂ ಚಾಲನೆ ನೀಡಿದರು.

ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆಯುತ್ತಿದ್ದು, ನಗರ ಪ್ರದೇಶದಲ್ಲಿ ಉಸಿರಾಡಲು ಹಸಿರು ಪ್ರದೇಶ (ಲಂಗ್ ಸ್ಪೇಸ್) ಇರಬೇಕು. ಐ.ಟಿ., ಬಿ.ಟಿ. ಕಂಪನಿಗಳಿರುವ ಈ ಪ್ರದೇಶ ಕಾಂಕ್ರೀಟ್ ಕಾಡಿನಂತಿದ್ದು, 17 ಎಕರೆಯಲ್ಲಿ ನಿರ್ಮಾಣವಾಗಲಿರುವ ಈ ವೃಕ್ಷೋಧ್ಯಾನ ಬೆಳಗಿನ ವಾಯು ವಿಹಾರಕ್ಕೆ ಬರುವವರಿಗೆ ಮತ್ತು ವಾರಾಂತ್ಯದಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು ಮಾಹಿತಿ ಮತ್ತು ಮನರಂಜನೆಯ ತಾಣವಾಗುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಇಲ್ಲಿ ಪಕ್ಷಿಲೋಕ (Bird aviary) ನಿರ್ಮಿಸಲಾಗುವುದು. ಎತ್ತರದ ಬೃಹತ್ ಪಂಜರದೊಳಗೆ ಮರಗಳನ್ನು ಬೆಳೆಸಿ ಅದರಲ್ಲಿ ವಿವಿಧ ಬಗೆಯ ಪಕ್ಷಿಗಳನ್ನು ಬಿಡಲಾಗುವುದು. ಈ ಹಕ್ಕಿಗಳ ಕಲರವ,  ಸ್ವಚ್ಛಂದ ಹಾರಾಟವನ್ನು ಸ್ಥಳೀಯರಷ್ಟೇ ಅಲ್ಲ, ಪ್ರವಾಸಿಗರೂ ಕಣ್ತುಂಬಿಕೊಳ್ಳುವಂತೆ ಮಾಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

500 ಕೋಟಿ ರೂ. ಬೆಲೆಯ ಭೂಮಿ ಮರು ವಶ

ಬೆಂಗಳೂರು ಹೊರವಲಯ ಕೆ.ಆರ್.ಪುರಂ ಹೋಬಳಿಯ ಕೊತ್ತನೂರಿನ ಸರ್ವೆ ನಂಬರ್ 47ರಲ್ಲಿನ 17 ಎಕರೆ 34 ಗುಂಟೆ ಜಮೀನನ್ನು ಬೆಂಗಳೂರು ನಗರ ಅಂದಿನ ಜಿಲ್ಲಾಧಿಕಾರಿಗಳು 2006ರ ಜೂನ್ ನಲ್ಲಿ ಅರಣ್ಯ ಎಂದು ಘೋಷಿಸಿದ್ದರು. ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಈ ಆದೇಶ ಪ್ರಶ್ನಿಸಲಾಗಿತ್ತು, ನ್ಯಾಯಾಲಯ ಅರಣ್ಯ ಎಂದು ಘೋಷಿಸಲಾಗಿದ್ದ ಜಿಲ್ಲಾಧಿಕಾರಿಯವರ ಆದೇಶ ಎತ್ತಿ ಹಿಡಿದಿತ್ತು.

17 ವರ್ಷಗಳ ತರುವಾಯ 2023ರ ಜನವರಿಯಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಎಂ.ಜಿ. ಶಿವಣ್ಣ ಮತ್ತು ತಹಶೀಲ್ದಾರ್ ಅಜಿತ್ ರೈ ಏಕಪಕ್ಷೀಯವಾಗಿ ಅರಣ್ಯ ಪ್ರದೇಶ ಎಂದು ಇಂಡೀಕರಣ ಆಗಿದ್ದ ಭೂಮಿಯನ್ನು ‘ಸರ್ಕಾರಿ ಭೂಮಿ’ ಎಂದು ಬದಲಾಯಿಸಿ. ಅರಣ್ಯ ಭೂಮಿ ಒತ್ತುವರಿ ಮಾಡಿದ್ದವರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಿದ್ದರು.

ಸಚಿವರ ಗಮನಕ್ಕೆ ಬಂದ ಕೂಡಲೇ, ಕಾನೂನು ಬಾಹಿರವಾಗಿ ಅರಣ್ಯ ಭೂಮಿಯನ್ನು ಕಂದಾಯ ಎಂದು ಮಾರ್ಪಾಡು ಮಾಡಿದ್ದ ಎ.ಸಿ ಮತ್ತು ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದ್ದರು.

ಇಬ್ಬರು ಹಿರಿಯ ಕೆಎಎಸ್ ಅಧಿಕಾರಿಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಸೆಕ್ಷನ್ 3ಬಿ ಮತ್ತು ಬಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತರುವಾಯ ಹೈಕೋರ್ಟ್ ನಲ್ಲಿ ಕೂಡ ಸದರಿ ಜಮೀನು ಅರಣ್ಯ ಇಲಾಖೆಗೆ ಸೇರಿದ್ದೆಂದು ತೀರ್ಪುಬಂದ ಹಿನ್ನೆಲೆಯಲ್ಲಿ ಮತ್ತೆ ಅರಣ್ಯ ಎಂದು ಜಿಲ್ಲಾಧಿಕಾರಿಗಳು ಇಂಡೀಕರಣ ಮಡಲು ಸೂಚಿಸಿದ್ದರು. ಅರಣ್ಯ ಇಲಾಖೆ ಈ  ಭೂಮಿಯನ್ನು ವಶಕ್ಕೆಪಡೆದು ಇಲ್ಲಿ ವೃಕ್ಷೋಧ್ಯಾನ ಮತ್ತು ಪಕ್ಷಿಲೋಕ ನಿರ್ಮಿಸಲು ಮುಂದಾಗಿದೆ. ಅರಣ್ಯ ಸಚಿವರ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments