Thursday, November 21, 2024
Google search engine
Homeತಾಜಾ ಸುದ್ದಿರೈತರಿಗೆ ಸಿಹಿಸುದ್ದಿ: ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳ ಭರ್ತಿಗೆ ಸೂಚನೆ

ರೈತರಿಗೆ ಸಿಹಿಸುದ್ದಿ: ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳ ಭರ್ತಿಗೆ ಸೂಚನೆ

ರಾಜ್ಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಿದ್ದು ಅಣೆಕಟ್ಟುಗಳು ತುಂಬಿವೆ. ನಮ್ಮ ಇಲಾಖೆಯ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌. ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಪಿಎಂಕೆಎಸ್‌ವೈ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಕೇಂದ್ರ ಅನುದಾನದ ಕುರಿತು  ಕೇಂದ್ರ ಜಲ ಆಯೋಗದ ನಿರ್ದೇಶಕರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಿಎಂಕೆಎಸ್‌ವೈ ಕಾಮಗಾರಿಗಳ ಪ್ರಗತಿ ಪರಿಶೀಲನೆ:

ಪಿಎಂಕೆಎಸ್‌ವೈ ಯೋಜನೆ ಅಡಿಯಲ್ಲಿ ಈಗಾಗಲೇ ಮಂಜೂರಾಗಿರುವ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಜಲ ಆಯೋಗದ ನಿರ್ದೇಶಕರು, ಅದಕ್ಕೆ ಬೇಕಾದಂತಹ ಅಗತ್ಯ ಕ್ರಿಯಾಯೋಜನೆಗಳನ್ನು ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ:

ರಾಜ್ಯಾದ್ಯಾಂತ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಬಹತೇಕ ಅಣೆಕಟ್ಟುಗಳು ತುಂಬಿವೆ. ಆದರೂ ಕೆಲವು ಕೆರೆಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗದೇ ಇರುವ ಬಗ್ಗೆ ಅಧಿಕಾರಿಗಳು ವರದಿಯನ್ನು ನೀಡಿದ್ದಾರೆ. ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಕೆರೆ ತುಂಬಿಸುವ ಕಾರ್ಯವನ್ನ ಮರುಚಾಲನೆಗೊಳಿಸಬೇಕು. ಎಲ್ಲಾ ಕೆರೆಗಳು ತುಂಬುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದಲ್ಲದೇ, ಅವುಗಳ ಸಮರ್ಪಕ ನಿರ್ವಹಣೆಗೂ ಅದ್ಯತೆ ನೀಡುವಂತೆ ಸೂಚನೆ ನೀಡಿದರು.

ನಿಷ್ಕ್ರಿಯ ಗೊಂಡಿರುವ ಏತ ನೀರಾವರಿ ಯೋಜನೆ ವರದಿ ನೀಡಿ:

ಆಯಾ ಕಾಲಕ್ಕೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಹಲವಾರು ಏತ ನೀರಾವರಿ ಯೋಜನೆಗಳನ್ನು ನಿರ್ಮಿಸಲಾಗಿದೆ. ಅವುಗಳ ನಿರ್ವಹಣೆ ಅವಧಿ ಮುಗಿದ ನಂತರ ಹಾಗೂ ಕಾಲಕ್ರಮೇಣ ಹಲವಷ್ಟು ನಿಷ್ಕ್ರಿಯಗೊಂಡಿವೆ. ಆಯಾ ವಲಯವಾರು ಕೈಗೊಂಡಿರುವ ಏತ ನೀರಾವರಿ ಯೋಜನೆಗಳ ಬಗ್ಗೆ, ಈಗ ಚಾಲ್ತಿಯಲ್ಲಿರುವ, ಸರಿಯಾದ ನಿರ್ವಹಣೆ ಆಗುತ್ತಿರುವ ಹಾಗೂ ನಿಷ್ಕ್ರಿಯಗೊಂಡಿರುವ ಯೋಜನೆಗಳ ಬಗ್ಗೆ ವರದಿ ನೀಡಬೇಕು. ಇವುಗಳನ್ನು ಪುನರುಜ್ಜೀವನಗೊಳಿಸಿದರೆ ಆಗುವ ಅನುಕೂಲಗಳು ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆಯು ಮಾಹಿತಿಯನ್ನು ಅದರಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು.

ವಿಭಾಗವಾರು ಹಾಗೂ ಉಪವಿಭಾಗವಾರು ಕಚೇರಿಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಜಾಗದ ಕೊರತೆಯಿದ್ದಲ್ಲಿ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರಕಾರದ ಗಮನಕ್ಕೆ ತರುವಂತೆ ಸೂಚನೆ ನೀಡಿದರು. ತೆರೆದ ಬಾವಿಗಳು ಹಾಗೂ ಹೂಳು ಎತ್ತುವ ಹೊಸ ಯೋಜನೆಗಳ ಪ್ರಸ್ತಾವನೆ ಸಲ್ಲಿಸುವುದನ್ನ ನಿಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ರಾಘವನ್‌, ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಹರ್ಷ ಸೇರಿದಂತೆ ಸಣ್ಣ ನೀರಾವರಿ ಇಲಾಕೆಯ ಕಾರ್ಯನಿರ್ವಾಹಕ ಇಂಜಿನೀಯರ್‌ಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments