ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಚೆನ್ನೈನ ಚೆಪಾಕ್ ನಲ್ಲಿ ಬಹುಶಃ ನಾನು ಆಡಿದ ಕೊನೆಯ ಪಂದ್ಯ ಆಗಿರಬಹುದು ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ.
ಚೆನ್ನೈನಲ್ಲಿ ಶುಕ್ರವಾರ ನಡೆದ ಐಪಿಎಲ್ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದರು. ಒಂದು ಹಂತದಲ್ಲಿ 78 ರನ್ ಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ತಂಡಕ್ಕೆ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ 95 ರನ್ ಜೊತೆಯಾಟದಿಂದ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದಿದ್ದರು.
ಐಪಿಎಲ್ ನಲ್ಲಿ 6 ತಂಡಗಳನ್ನು ಪ್ರತಿನಿಧಿಸಿರುವ ದಿನೇಶ್ ಕಾರ್ತಿಕ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿಯೂ ಆಡಿದ್ದಾರೆ. ಇದೀಗ ಆರ್ ಸಿಬಿ ತಂಡದಲ್ಲಿ ಫಿನಿಷರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಚೆನ್ನೈನಲ್ಲಿ ಆರ್ ಸಿಬಿ ಪಂದ್ಯ ಮುಗಿದಿದೆ. ಒಂದು ವೇಳೆ ಆರ್ ಸಿಬಿ ಪ್ಲೇಆಫ್ ತಲುಪಿದರೆ ಇಲ್ಲಿ ಆಡಬಹುದಾಗಿದೆ. ಈ ಬಗ್ಗೆ ಪಂದ್ಯದ ನಂತರ ಕೇಳಿದ ಪ್ರಶ್ನೆಗೆ ಬಹುಶಃ ಇದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಇದು ನನ್ನ ಕೊನೆಯ ಪಂದ್ಯವಾಗಬಹುದು ಎಂದು ಉತ್ತರಿಸಿದರು. ಈ ಮೂಲಕ ನಿವೃತ್ತಿಯ ಸುಳಿವು ನೀಡಿದ್ದಾರೆ.
ಚೆನ್ನೈನಲ್ಲಿ ಇದು ನನ್ನ ಕೊನೆಯ ಪಂದ್ಯ ಆಗದಿರಲಿ ಎಂಬುದು ನನ್ನ ಉದ್ಧೇಶ. ಏಕೆಂದರೆ ಪ್ಲೇಆಫ್ ಈ ಮೈದಾನದಲ್ಲಿ ಆಡಲು ಅವಕಾಶ ಸಿಗಬಹುದು. ಸಿಕ್ಕರೆ ಅದು ನನ್ನ ಕೊನೆಯ ಪಂದ್ಯವಾಗಬಹುದು. ಇಲ್ಲದಿದ್ದರೆ ಇದೇ ನನ್ನ ಕೊನೆಯ ಪಂದ್ಯ ಎಂದು ಭಾವಿಸಬಹುದು ಎಂದು ಕಾರ್ತಿಕ್ ಹೇಳಿದರು.