ಗ್ಯಾರಂಟಿ ಯೋಜನೆಗಳ ಜಾರಿಯಿಂದ ಹಣಕಾಸು ಸಮಸ್ಯೆ ನೀಗಿಸಿಕೊಳ್ಳಲು ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸುಮಾರು 20 ಸಾವಿರ ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಖಾಸಗಿಗೆ ವಹಿಸಲು ನಿರ್ಧರಿಸಿದೆ.
ಬಿಡಿಎಗೆ ಸೇರಿದ 7 ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಾಣ ಮಾಡುವ ನೆಪದಲ್ಲಿ ಖಾಸಗಿ ಕಂಪನಿಗಳಿಗೆ 30 ವರ್ಷಗಳಿಗೆ ಮಾರ್ವಿಕ್ ಹೋಲ್ಡಿಂಗ್ ಇನ್ವೆಸ್ಟ್ ಮೆಂಟ್ ಪ್ರವೇಟ್ ಲಿಮಿಟೆಡ್ ಮತ್ತು ಎಂ-ಫಾರ್ ಡೆವಲಪರ್ಸ್ ಪ್ರವೇಟ್ ಲಿಮಿಟೆಡ್ ಗೆ ಗುತ್ತಿಗೆ ನೀಡಲು ಮುಂದಾಗಿದೆ.
ಇಂದಿರಾನಗರ ವಾಣಿಜ್ಯ ಸಂಕೀರ್ಣವನ್ನು ಮಾರ್ವಿಕ್ ಹೋಲ್ಡಿಂಗ್ ಇನ್ವೆಸ್ಟ್ ಮೆಂಟ್ ಪ್ರವೇಟ್ ಲಿಮಿಟೆಡ್ ಗೆ ಹಾಗೂ ಕೋರಮಂಗಲ, ಹೆಚ್‌ಎಸ್‌ಆರ್ ಬಡಾವಣೆ, ಆರ್.ಟಿ.ನಗರ, ಆಸ್ಟಿನ್ ಟೌನ್, ಸದಾಶಿವನಗರ ಮತ್ತು ವಿಜಯನಗರ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಎಂ-ಫಾರ್ ಡೆವಲಪರ್ಸ್ ಪ್ರವೇಟ್ ಲಿಮಿಟೆಡ್ ಗೆ ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಮರು ನಿರ್ಮಾಣ ಮಾಡುವ ಗುತ್ತಿಗೆ ನೀಡಲಾಗಿದೆ.
7 ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಗುತ್ತಿಗೆ ಪಡೆದ ಖಾಸಗಿ ಕಂಪನಿಗಳು ಮರು ನಿರ್ಮಾಣ ಮಾಡಿ, 70:30ರ ಅನುಪಾತದಲ್ಲಿ 30 ವರ್ಷಕ್ಕೆ ಗುತ್ತಿಗೆ ನೀಡಲಾಗಿದ್ದು, 30 ವರ್ಷಕ್ಕೆ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಸದಾಶಿವ ನಗರ, ವಿಜಯ ನಗರ ಬಿಡಿಎ ಕಾಂಪ್ಲೆಕ್ಸ್ ನ್ನು ಕೆಡಹುವ ಕೆಲಸವೂ ನಡೆದಿದೆ. ಎಲ್ಲ ವಾಣಿಜ್ಯ ಸಂಕೀರ್ಣಗಳ ಎಲ್ಲ ವರ್ತಕರಿಗೆ ಮಳಿಗೆಗಳನ್ನು ಒಂದು ತಿಂಗಳಲ್ಲಿ ಖಾಲಿ ಮಾಡುವಂತೆ ನೋಟೀಸ್ ಕೂಡ ನೀಡಲಾಗಿದೆ.
ಮೇವರಿಕ್ ಕಂಪನಿಯು ಬೆಂಗಳೂರಿನ ಬಿಜೆಪಿ ಶಾಸಕರಿಗೆ ಸೇರಿದ್ದರೆ, ಎಂ-ಫಾರ್ ಕಂಪನಿಯಲ್ಲಿ ಕಾಂಗ್ರೆಸ್ ನ ಸಚಿವ ಹಾಗೂ ಕೆಲ ಶಾಸಕರು ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 2008ರಿಂದ ಪ್ರಸ್ತಾವನೆ ಹಂತದಲ್ಲೇ ಇದ್ದ ಈ ಪ್ರಕ್ರಿಯೆ ಇದೀಗ ತರಾತುರಿಯಲ್ಲಿ ಜಾರಿಯಾಗಿದೆ.
7 ಸಂಕೀರ್ಣಗಳ ಮೌಲ್ಯ 20 ಸಾವಿರ ಕೋಟಿ ರೂ.!
7 ಬಿಡಿಎ ಕಾಂಪ್ಲೆಕ್ಸ್ ಗಳ ಒಟ್ಟು ವಿಸ್ತೀರ್ಣ 25 ಎಕರೆ ಆಗಿದ್ದು, ಇದರ ಮೌಲ್ಯ ಸುಮಾರು 20 ಸಾವಿರ ಕೋಟಿ ರೂ. ಆಗಿದೆ. ಹೆಚ್‌ಎಸ್‌ಆರ್ ಮತ್ತು ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್ ಇರುವ ಜಾಗ ಪ್ರಸ್ತುತ ಚದರ ಅಡಿಗೆ 50 ಸಾವಿರ ರೂ. ಇದೆ.