ಬೆಂಗಳೂರಿನ ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇರಿಸಿ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ.
ಕಾಫಿ ಶಾಪ್ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮನೋಜ್ ಶನಿವಾರ (ಆಗಸ್ಟ್ 10) ಬೆಳಗ್ಗೆ ಮಹಿಳೆಯರ ಶೌಚಾಲಯಕ್ಕೆ ಹೋಗಿ ಕಸದ ಬುಟ್ಟಿಯಲ್ಲಿ ರಂಧ್ರ ಕೊರೆದು ಮೊಬೈಲ್ ಇರಿಸಿದ್ದಾನೆ.
ಮೊಬೈಲ್ ಫ್ಲೈಟ್ ಮೂಡ್ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿ ಹೊರ ಬಂದಿದ್ದಾನೆ. ಶೌಚಾಲಯಕ್ಕೆ ಹೋದ ಮಹಿಳೆಯೊಬ್ಬರು ಕಸದ ಬುಟ್ಟಿಯಲ್ಲಿ ಮೊಬೈಲ್ ಇರುವುದನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಆರೋಪಿ ಮನೋಜ್ನನ್ನು ಬಂಧಿಸಿದ್ದಾರೆ.
ನಮ್ಮ ಬೆಂಗಳೂರಿನ ಬಿಇಎಲ್ ರಸ್ತೆಯ ಶಾಖೆಯಲ್ಲಿ ನಡೆದ ಅಹಿತಕರ ಘಟನೆಗೆ ನಾವು ವಿಷಾದಿಸುತ್ತೇವೆ. ಮತ್ತು ಥರ್ಡ್ ವೇವ್ ಕಾಫಿಯಲ್ಲಿ ಅಂತಹ ಕ್ರಮಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆ ನಮಗೆ ಬಹಳ ಮುಖ್ಯ. ಈ ಪರಿಸ್ಥಿತಿಯನ್ನು ನಾವು ತ್ವರಿತವಾಗಿ ಪರಿಹರಿಸಿದ್ದೇವೆ ಎಂದು ಥರ್ಡ್ ವೇವ್ ಕೆಫೆ ಇಂಡಿಯಾ ಪ್ರತಿಕ್ರಿಯಿಸಿದೆ.
ಸಿದ್ದಾರ್ಥ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ, ಬೆಂಗಳೂರಿನ ಥರ್ಡ್ ವೇವ್ ಕಾಫಿ ಔಟ್‌ಲೆಟ್‌ನ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ ಎಂದು ನಂಬಲಾಗುತ್ತಿಲ್ಲ. ಅಂತಹ ಜನಪ್ರಿಯ ಸ್ಥಳದಲ್ಲಿ ಇಂತಹವೆಲ್ಲಾ ನಡೆಬಹುದು ಎಂಬುದು ಹುಚ್ಚುತನದ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ.