ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಬೆಚ್ಚಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳು ಸಿಎಂ ಸಿದ್ದರಾಮಯ್ಯ ಜೊತೆ ನಡೆಸಿದ ರಾಜೀ ಸಂಧಾನ ಯಶಸ್ವಿಯಾಗಿದ್ದು, ಎರಡೂ ಬ್ಯಾಂಕ್ ಗಳು ನಿಶ್ಚಿತ ಠೇವಣಿಯ ಮೊತ್ತ ವಾಪಸ್ ಮಾಡಲು 15 ದಿನಗಳ ಕಾಲವಕಾಶ ಕೇಳಿದೆ.
ವಾಲ್ಮೀಕಿ ಹಗರಣದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರಕಾರ ಬ್ಯಾಂಕ್ ಗಳಲ್ಲಿ ಇರಿಸಿದ ಠೇವಣಿ ಹಣದ ದುರುಪಯೋಗ ಮಾಡಿದ ಎಸ್ ಬಿಐ ಮತ್ತು ಪಿಎನ್ ಬಿ ಬ್ಯಾಂಕ್ ಗಳಲ್ಲಿ ಸರ್ಕಾರ ಹಾಗೂ ಸರ್ಕಾರಿ ಸೌಮ್ಯದ ಎಲ್ಲಾ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿ ಹಣ ವಾಪಸ್ ಪಡೆಯುವಂತೆ ಸೂಚಿಸಿತ್ತು.
ರಾಜ್ಯ ಸರ್ಕಾರದ ನಡೆಗೆ ಬೆಚ್ಚಿದ ಎಸ್ ಬಿಐ ಮತ್ತು ಪಿಎನ್ ಬಿ ಬ್ಯಾಂಕ್ ಗಳ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನ ಸಿಎಂ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಂಧಾನ ಸಭೆ ನಡೆಸಿದ್ದು ರಾಜ್ಯ ಸರ್ಕಾರದ ಷರತ್ತುಗಳಿಗೆ ಮಣಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ಯಾಂಕ್ ಗಳ ಖಾತೆ ತಡೆಗೆ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ.
ಎಸ್ಬಿಐ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿನೋದ್ ಜೈಸ್ವಾಲ್ ಕೆಐಎಡಿಬಿ ಸೇರಿದಂತೆ ಸರ್ಕಾರದ ಠೇವಣಿ ಹಣದ ಮೊತ್ತ ವಾಪಸ್ ಮಾಡಲು 15 ದಿನಗಳ ಕಾಲವಕಾಶ ನೀಡುವಂತೆ ಮನವಿ ಮಾಡಿದ್ದಾರೆ.