ನವೆಂಬರ್ 1ರಿಂದ 10 ದಿನಗಳ ಕಾಲ ದೇಶಾದ್ಯಂತ ನೋಂದಣಿ ಅಭಿಯಾನ ನಡೆಸಲು ನಿರ್ಧರಿಸಿರುವ ಬಿಜೆಪಿ 10 ಕೋಟಿ ನೂತನ ಸದಸ್ಯರ ನೋಂದಣಿ ಗುರಿ ಪೂರೈಸುವ ನಿರ್ಧಾರ ಮಾಡಿದೆ.
ದೆಹಲಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೋಂದಣಿ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.
ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಯಲಿರುವ ಜಮ್ಮು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಮಿಸ್ಡ್ ಕಾಲ್ ನೀಡುವುದು, ಬಿಜೆಪಿ ಅಧಿಕೃತ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ಹೊಸ ಸದಸ್ಯರ ನೋಂದಣಿಗೆ ಬಳಸಿಕೊಳ್ಳಲು ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ತಿಳಿಸಿದ್ದಾರೆ.
2014ರಲ್ಲಿ ಬಿಜೆಪಿ 11 ಕೋಟಿ ಸದಸ್ಯತ್ವ ನೋಂದಣಿ ಮಾಡಿತ್ತು. 2019ರಲ್ಲಿ 7 ಕೋಟಿ ಹೊಸ ಸದಸ್ಯರ ನೋಂದಣಿ ಆಗಿತ್ತು. ಈ ಎರಡೂ ವರ್ಷಗಳಲ್ಲಿ ಒಟ್ಟಾರೆ 18 ಕೋಟಿ ನೂತನ ಸದಸ್ಯರ ನೋಂದಣಿ ಆಗಿತ್ತು. ನಂತರ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಎರಡು ವರ್ಷ ಯಾವುದೇ ನೋಂದಣಿ ಅಭಿಯಾನ ಹಮ್ಮಿಕೊಂಡಿರಲಿಲ್ಲ ಎಂದು ಅವರು ಹೇಳಿದರು.