ಬದಲಾವಣೆ ತರಲು ಮತ್ತೊಂದು ಅತ್ಯಾಚಾರ ಆಗಲಿ ಎಂದು ಕಾಯುವ ಸ್ಥಿತಿಯಲ್ಲಿ ದೇಶ ಇಲ್ಲ ಎಂದು ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಕೋಲ್ಕತಾ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ಪ್ರಕರಣದ ತನಿಖೆಯಲ್ಲಿ ಲೋಪಗಳಾಗಿರುವುದನ್ನು ಎತ್ತಿ ಹಿಡಿಯಿತು.
ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಫ್ ಐಆರ್ ದಾಖಲಾಗಿಲ್ಲ. ವೈದ್ಯೆಯ ಶವ ಹಸ್ತಾಂತರಗೊಂಡ 3 ಗಂಟೆಗಳ ನಂತರ ಎಫ್ ಐಆರ್ ದಾಖಲಿಸಲಾಗಿದೆ. ಅಲ್ಲದೇ ವಿಚಾರಣೆ ಸಮರ್ಪಕ ರೀತಿಯಲ್ಲಿ ಆಗಿಲ್ಲ. ಇಡೀ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರ, ಅಧಿಕಾರಿಗಳು ಸೇರಿದಂತೆ ವ್ಯವಸ್ಥೆಯಲ್ಲಿಯೇ ಲೋಪ ಕಂಡು ಬರುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವೈದ್ಯರು ದಾಳಿಗೆ ಸುಲಭವಾಗಿ ಗುರಿಯಾಗುತ್ತಿದ್ದಾರೆ. ಅದರಲ್ಲೂ ಮಹಿಳಾ ವೈದ್ಯರು ಹೆಚ್ಚಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವೈದ್ಯ ವೃತ್ತಿ ತೆಗೆದುಕೊಳ್ಳುತ್ತಿರುವಾಗ ಅವರ ರಕ್ಷಣೆಗೆ ಸೂಕ್ತ ಹಾಗೂ ಬಲಿಷ್ಠ ಕಾನೂನು ತರಬೇಕಾಗಿದೆ. ಇದಕ್ಕಾಗಿ ದೇಶ ಮತ್ತೊಂದು ಅತ್ಯಾಚಾರ ನಡೆಯಲಿ ಎಂದು ಕಾಯುವ ಸ್ಥಿತಿಯಲ್ಲಿ ಇಲ್ಲ ಎಂದು ಚಾಟಿ ಬೀಸಿತು.
31 ವರ್ಷದ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಾಗ ಕಾಲೇಜಿನ ಪ್ರಿನ್ಸಿಪಾಲ್ ಏನು ಮಾಡುತ್ತಿದ್ದರು? ಶವ ಹಸ್ತಾಂತರಗೊಂಡ 3 ಗಂಟೆಗಳ ನಂತರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಅಲ್ಲಿಯವರೆಗೂ ಪೊಲೀಸರು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದೆ.
ಇದೇ ವೇಳೆ ಪಶ್ಚಿಮ ಬಂಗಾಳ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಾಲ್, ವೈದ್ಯೆ ಹತ್ಯೆಯಾದ ಬೆನ್ನಲ್ಲೇ ಫೋಟೊ ಮತ್ತು ವೀಡಿಯೋ ಸಂಗ್ರಹಿಸಲಾಗಿದೆ. ಪ್ರಿನ್ಸಿಪಾಲ್ ಅವರನ್ನು 2 ದಿನಗಳ ನಂತರ ರಾಜೀನಾಮೆ ನೀಡಿದ್ದು, 53 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಅಲ್ಲದೇ ಸರ್ಕಾರ ಕೂಡಲೇ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ ಎಂದು ಉತ್ತರಿಸಿದರು.