ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅತ್ಯುತ್ತಮ ಆಡಳಿತ ನೀಡಿದ್ದಕ್ಕಾಗಿ ಜನಸಾಮಾನ್ಯರ ಆಯ್ಕೆಯಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದರೂ ಅವರ ಜನಪ್ರಿಯತೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ.
ಮೂಡ್ ಆಫ್ ನೇಷನ್ ಸಿ ವೋಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆಯಲ್ಲಿ ಅಲ್ಪ ಕುಸಿತ ಕಂಡು ಬಂದಿದ್ದರೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಬಿಜೆಪಿ ಕೇಂದ್ರದಲ್ಲಿ ಪೂರ್ಣ ಬಹುಮತ ಪಡೆಯಲು ವಿಫಲವಾಗಿತ್ತು. ಇದರಿಂದ ಬಿಜೆಪಿ ನಾಯಕರ ವರ್ಚಸ್ಸು ಕುಸಿತ ಕಂಡಿದೆ.
ದೇಶಾದ್ಯಂತ 30 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 1,36,463 ಜನರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಯೋಗಿ ಆದಿತ್ಯನಾಥ್ ಜನಪ್ರಿಯತೆಯಲ್ಲಿ ಮೊದಲ ಸ್ಥಾನ ಗಳಿಸಿದ್ದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 2ನೇ ಸ್ಥಾನ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮೂರನೇ ಸ್ಥಾನ ಪಡೆದಿದ್ದಾರೆ.
ಯೋಗಿ ಆದಿತ್ಯನಾಥ್ ಪರ ಶೇ.33.2ರಷ್ಟು ಮತಗಳು ಬಂದಿದ್ದರೆ, ಕೇಜ್ರಿವಾಲ್ ಪರ ಶೇ.13.8, ಮಮತಾ ಬ್ಯಾನರ್ಜಿ ಪರ ಶೇ.9.3ರಷ್ಟು ಮತಗಳು ಬಂದಿದೆ. ಉಳಿದ ಮುಖ್ಯಮಂತ್ರಿಗಳು ಶೇ.10ರಷ್ಟು ಮತಗಳನ್ನು ಪಡೆದಿಲ್ಲ ಎಂಬುದು ವಿಶೇಷ.
ತಮಿಳುನಾಡಿನ ಮುಖ್ಯಮಂತ್ರಿ ಡಿಎಂಕೆ ಸ್ಟಾಲಿನ್ ಶೇ.4.7 ಮತ್ತು ತೆಲುಗುದೇಶಂನ ಚಂದ್ರಬಾಬು ನಾಯ್ಡು ಶೇ.4.6ರಷ್ಟು ಮತಗಳನ್ನು ಪಡೆದು ಅಗ್ರ 5ರಲ್ಲಿ ಸ್ಥಾನ ಗಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಲೋಕಸಭಾ ಚುನಾವಣೆಗೂ ಮುನ್ನ ಅಂದರೆ ಫೆಬ್ರವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.51ರಷ್ಟು ಮತಗಳನ್ನು ಪಡೆದಿದ್ದರು. ಈ ಬಾರಿ ಶೇ.33ರಷ್ಟು ಮತಗಳನ್ನು ಪಡೆದಿದ್ದು, 12 ಅಂಕ ಕಡಿಮೆ ಪಡೆದಿರುವುದು ಅವರ ಜನಪ್ರಿಯತೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ.
ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಂದ ಬಿಜೆಪಿ ಆಡಳಿತದ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದು, ಇದರಿಂದ ಬಿಜೆಪಿ ನಾಯಕರ ಜನಪ್ರಿಯತೆ ಕುಸಿಯಲು ಕಾರಣ ಎನ್ನಲಾಗಿದೆ.