ಕೋಲ್ಕತಾದಲ್ಲಿ ವೈದ್ಯೆ ಹತ್ಯೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿರುವ ಬೃಹತ್ ಪ್ರತಿಭಟನೆಗೆ 6000 ಪೊಲೀಸರು ಹಾಗೂ ಮೂರು ಹಂತಗಳ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.
ನಬಾನೊ ಅಭಿಯಾನ್ ಹೆಸರನಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದ್ದು, ನಬಾಬೊ ಪಶ್ಚಿಮ ಬಂಗಾಳ ಸರ್ಕಾರದ ಆಡಳಿತ ಕಚೇರಿಯಾಗಿದ್ದು, ಇಲ್ಲಿ ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ಸಚಿವರು ಹಾಗೂ ಪ್ರಮುಖ ಆಡಳಿತಾಧಿಕಾರಿಗಳ ಕಚೇರಿ ಇವೆ.
ಆಗಸ್ಟ್ 9ರಂದು ಕೋಲ್ಕತಾದ ಆರ್ ಜೆ ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಂತರ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ವಿಚಾರಣೆ ಕೂಡ ನಡೆಸುತ್ತಿದೆ.
ಈ ಹಂತದಲ್ಲಿ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದು, ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಪೊಲೀಸರು 6000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಪ್ರತಿಭಟನೆ ವೇಳೆ ಕಣ್ಗಾವಲು ಇಡಲು ರೋಬೋ ಕಾಪ್, ಡ್ರೋಣ್ ಗಳನ್ನು ಕೂಡ ನಿಯೋಜಿಸಲಾಗಿದ್ದು, ಮೂರು ಸ್ತರಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 26 ಡೆಪ್ಯೂಟಿ ಪೊಲೀಸ್ ಕಮಿಷನರ್ ಗಳಿಗೆ ವಿವಿಧ ಆಯಕಟ್ಟಿನ ಜಾಗದ ಉಸ್ತುವಾರಿ ವಹಿಸಲಾಗಿದೆ.
ಪ್ರತಿಭಟನಾ ಮೆರವಣಿಗೆ ವೇಳೆ ಕೆಲವು ಕಿಡಿಗೇಡಿಗಳು ಅವಕಾಶ ಬಳಸಿಕೊಂಡು ಹಿಂಸಾಚಾರಕ್ಕೆ ಇಳಿಯುವ ಸಾಧ್ಯತೆ ಇದ್ದು, ಆಸ್ತಿಪಾಸ್ತಿ ನಷ್ಟ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.