ಸರಿಯಾಗಿ ಬಟ್ಟೆ ಧರಿಸದಿದ್ದರೆ ಆಸಿಡ್ ಎರಚುವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇಟಿಯೋಸ್ ಸರ್ವಿಸಸ್ ಕಂಪನಿ ಸೇವೆಯಿಂದ ವಜಾಗೊಳಿಸಿದೆ.
ಪತ್ನಿಗೆ ಮಾಡಿದ ಮೆಸೇಜ್ ನ ಸ್ಕ್ರೀನ್ ಶಾಟ್ ಅನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ್ದ ನಿಕಿತ್ ಶೆಟ್ಟಿ ಎಂಬಾತನನ್ನು ಕಂಪನಿಯು ಸೇವೆಯಿಂದ ವಜಾಗೊಳಿಸಿದೆ.
ನಿನಗಿಷ್ಟ ಬಂದ ಬಟ್ಟೆಗಳನ್ನು ಹಾಕಿಕೊಳ್ಳಬೇಡ. ಸರಿಯಾಗಿರುವ ಬಟ್ಟೆ ಹಾಕಿಕೊ. ಇಲ್ಲದಿದ್ದರೆ ಮುಖದ ಮೇಲೆ ಆಸಿಡ್ ಎರಚುವೆ ಎಂದು ನಿಕಿತ್ ಶೆಟ್ಟಿ ಮಹಿಳೆಗೆ ಮೆಸೇಜ್ ಮಾಡಿದ್ದ. ಈ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದ ಪತಿ, ನನ್ನ ಪತ್ನಿ ಬಟ್ಟೆಯ ಆಯ್ಕೆಯನ್ನು ನಿರ್ಧರಿಸುವ ಆ ವ್ಯಕ್ತಿ ಯಾರು? ಈ ರೀತಿ ಬೆದರಿಕೆ ಹಾಕುವವರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಿ ಎಂದು ಪತಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಅನ್ನು ಷೇರ್ ಮಾಡಿಕೊಂಡಿದ್ದ ಪತ್ರಕರ್ತ ಶಹಬಾಜ್ ಅಜರ್, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರನ್ನು ಟ್ಯಾಗ್ ಮಾಡಿ ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಿಕಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿ ಇಟಿಯೋಸ್ ಸರ್ವಿಸಸ್ ಕೂಡಲೇ ಆತನನ್ನು ಸೇವೆಯಿಂದ ವಜಾ ಮಾಡಿದೆ.
ಈ ವಿಷಯ ತಿಳಿದ ಮಹಿಳೆಯ ಪತಿ ಸಂಬಂಧಪಟ್ಟವರಿಗೆ ಧನ್ಯವಾದ ಅರ್ಪಿಸಿದ್ದು, ನನ್ನ ಮನವಿಗೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ಬೆಂಗಳೂರು ಸುರಕ್ಷಿತ ಮಾಡಲು ನಿಮ್ಮ ಕೊಡುಗೆ ಅಗತ್ಯ ಎಂದು ಪೋಸ್ಟ್ ಮಾಡಿದ್ದಾರೆ.