ಜೈ ಶ್ರೀರಾಮ್ ಅಂತ ಸಿನಿಮಾ ಹಾಡು ಹಾಕಿ ಕುಣಿದಿದ್ದಕ್ಕಾಗಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್‌ನ ಮೈಲೂರು ಕ್ರಾಸ್ ಬಳಿ ಇರುವ ಗುರುನಾನಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಆಗಿದೆ.
ಕಾಲೇಜಿನಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮದ ವೇಳೆ ಯೂಟ್ಯೂಬ್‌ನಲ್ಲಿ ಹಾಡನ್ನು ಹಾಕುವಾಗ ನೃತ್ಯಕ್ಕೆ ಅನುಕೂಲ ಆಗಲೆಂದು ಜೈ ಶ್ರೀರಾಮ್ ಡಿಜೆ ಹಾಡನ್ನು ಹಾಕಲಾಗಿದೆ. ಈ ವೇಳೆ ವಿದ್ಯಾರ್ಥಿಗಳ ಒಂದು ಗುಂಪು ವಿರೋಧಿಸಿ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದೆ. ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿಗಳ ಮತ್ತೊಂದು ಗುಂಪು ಗಲಾಟೆ ಆರಂಭಿಸಿದ್ದರಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಆರಂಭವಾಗಿದೆ ಎನ್ನಲಾದ ಗಲಾಟೆಯು ಇಂಜಿನಿಯರಿಂಗ್ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳ ನಡುವೆ ಜಗಳಕ್ಕೆ ಕಾರಣವಾಗಿದೆ. ಇದರಿಂದಾಗಿ ಕಾಲೇಜು ಸಭಾಂಗಣದಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಾಡನ್ನು ಹಾಕುತ್ತಿದ್ದ ವಿರೇಂದ್ರ ಪಾಟೀಲ್ ಎಂಬ ವಿದ್ಯಾರ್ಥಿ ಮೇಲೆ ವಿದ್ಯಾರ್ಥಿಗಳ ಮತ್ತೊಂದು ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ.
ಗಾಂಧಿ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ.