ನೈಋತ್ಯ ಮುಂಗಾರು ಮತ್ತೆ ಚುರುಕಾಗಿದ್ದು, ಮುಂದಿನ 2 ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಘೋಷಿಸಿದೆ.
ಗುಜರಾತ್ ಕಡಲ ತೀರದಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಇದರ ಪರಿಣಾಮ ಮಲೆನಾಡು ಹಾಗೂ ರಾಜ್ಯದ ಕರಾವಳಿಗಳ ಮೇಲೆ ಪ್ರಭಾವ ಬೀರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ.
ನೈಋತ್ಯ ಮುಂಗಾರು ದುರ್ಬಲಗೊಂಡ ಕಾರಣ ಜೂನ್ ವೇಳೆಗೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬರಬೇಕಿದ್ದ ಮಳೆಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಆದರೆ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಗಿಂತ ಉತ್ತಮ ಮಳೆಯಾಗಿದೆ.
ಜೂನ್ 1ರಿಂದ 24ರವರೆಗೆ ಬೆಂಗಳೂರು ನಗರದಲ್ಲಿ 130 ಮಿ.ಮೀ. ಮಳೆಯಾಗಿದ್ದು, ಸರಾಸರಿ ಮಳೆಗಿಂತ ಶೇ.107ರಷ್ಟು ಹೆಚ್ಚಿನ ಮಳೆಯಾಗಿದೆ.
ಬೆಂಗಳೂರಿನ ಜೀವನದಿಯಾದ ಕಾವೇರಿ ಜಲನಯನ ಪ್ರದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಮಳೆಯಾಗಿದೆ. ಕಳೆದ ವರ್ಷ ಕೆಆರ್ ಎಸ್ ಜಲಾಶಯದಲ್ಲಿ ಇದೇ ವೇಳೆ 9.81 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ವರ್ಷ 14.91 ಟಿಎಂಸಿ ಸಂಗ್ರಹವಾಗಿದೆ. ಕೆಆರ್ ಎಸ್ ಡ್ಯಾಂನಲ್ಲಿ ಪ್ರಸ್ತುತ ನೀರಿನ ಮಟ್ಟ 85 ಅಡಿಯಷ್ಟಿದೆ.