ವಿವಿಧ ಪ್ರಕರಣಗಳಲ್ಲಿ ಜಫ್ತಿ ಮಾಡಿದ ಸ್ವತ್ತುಗಳನ್ನು ದುರ್ಬಳಕೆ ಮಾಡಿಕೊಂಡ ಬೆಂಗಳೂರಿನ ಸಿಐಡಿ ಪೊಲೀಸ್ ಇನ್ ಸ್ಪೆಕ್ಟರ್ ವಿರುದ್ಧ ಪೊಲೀಸರೇ ಪ್ರಕರಣ ದಾಖಲಿಸಿದ್ದಾರೆ.
ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ ಮೆಂಟ್ (ಸಿಐಡಿ) ಪೊಲೀಸ್ ಇನ್ ಸ್ಪೆಕ್ಟರ್ 45 ವರ್ಷದ ಎಂ.ಎಸ್. ಹಿತೇಂದ್ರ ವಿರುದ್ಧ ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
2016 ಜುಲೈ 2ರಿಂದ 2019 ಫೆಬ್ರವರಿ 22ರ ಅವಧಿಯಲ್ಲಿ ಸುಮಾರು 24 ಪ್ರಕರಣಗಳಲ್ಲಿ ದಾಳಿಯ ವೇಳೆ ವಶಪಡಿಸಿಕೊಂಡು ಪೊಲೀಸರ ವಶದಲ್ಲಿದ್ದ ಪೆನ್ ಡ್ರೈವ್, ಚಿನ್ನಾಭರಣ, ಡಿಜಿಟಲ್ ಸಾಕ್ಷ್ಯ ಹಾಗೂ ದಾಖಲಾತಿಗಳು ನಾಪತ್ತೆಯಾಗಿವೆ.
ನ್ಯಾಯಾಲಯ ಈ ಪ್ರಕರಣಗಳ ವಿಚಾರಣೆ ವೇಳೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದಾಗ ಆ ಸ್ವತ್ತು ಹಾಗೂ ದಾಖಲೆಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. 2022 ಏಪ್ರಿಲ್ ನಲ್ಲಿ ಜೆಪಿ ನಗರ ಪೊಲೀಸ ಠಾಣೆಯ ಜವಾಬ್ದಾರಿ ವಹಿಸಿಕೊಂಡ ಪೊಲೀಸ್ ಇನ್ ಸ್ಪೆಕ್ಟರ್ ರಾಧಾಕೃಷ್ಣ ಮೌಖಿಕವಾಗಿ ದಾಖಲೆಗಳನ್ನು ನೀಡುವಂತೆ ಹೇಳಿದ್ದಾರೆ. ಅಧಿಕೃತವಾಗಿ ಪತ್ರ ವ್ಯವಹಾರದ ಮೂಲಕ ಸೂಚನೆ ನೀಡಿದರೂ ಆದರೆ ಇದಕ್ಕೆ ಸ್ಪಂದಿಸದೇ ಹಿತೇಂದ್ರ ಸ್ವತ್ತುಗಳನ್ನು ವಾಪಸ್ ಮಾಡಿರಲಿಲ್ಲ.
ಪೊಲೀಸ್ ಆಯುಕ್ತರ ಗಮನಕ್ಕೆ ರಾಧಕೃಷ್ಣ ಈ ವಿಷಯವನ್ನು ತಂದಿದ್ದಾರೆ. ಇದಾಗಿಯೂ ಹಿತೇಂದ್ರ ಸ್ವತ್ತುಗಳನ್ನು ಮರಳಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡದರೂ ಪ್ರತಿಕ್ರಿಯಿಸದ ಕಾರಣ ಸೆಕ್ಷನ್ 409 ಕಾಯ್ದೆಯನ್ವಯ ನಿಯಮ ಉಲ್ಲಂಘನೆ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.