ಕಸದ ತೊಟ್ಟಿಯನ್ನು ಸ್ವಚ್ಛಗೊಳಿಸುವಾಗ ಸುಮಾರು 5 ಲಕ್ಷ ರೂ. ಮೌಲ್ಯದ ಡೈಮಂಡ್ ನಕ್ಲೇಸ್ ಪತ್ತೆಯಾಗಿದೆ. ಪೌರ ಕಾರ್ಮಿಕ ಈ ನಕ್ಲೇಸ್ ಅನ್ನು ಮಾಲೀಕರಿಗೆ ವಾಪಸ್ ಕೊಡುವ ಮೂಲಕ ಪೌರಕಾರ್ಮಿಕ ಔದಾರ್ಯ ಮೆರೆದ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ.
ಮೊಮ್ಮಗಳ ಮದುವೆಗೆಂದು ತಾಯಿ ನೀಡಿದ್ದ ಡೈಮಂಡ್ ನಕ್ಲೇಸ್ ಅನ್ನು ಮಗ ಆಕಸ್ಮಿಕವಾಗಿ ಬಿಸಾಡಿದ್ದರು. ಅದು ರಸ್ತೆಬದಿಯ ಕಸದ ತೊಟ್ಟಿ ಸೇರಿತ್ತು.
ಮೊಮ್ಮಗಳ ಮದುವೆಗೆ ಅಮ್ಮ ಕೊಟ್ಟ ನಕ್ಲೇಸ್ ಅನ್ನು ಆಕಸ್ಮಿಕವಾಗಿ ಬಿಸಾಕಿದ್ದರಿಂದ ಆದ ತಪ್ಪು ಕೂಡಲೇ ಅರಿವಿಗೆ ಬರುತ್ತಿದ್ದಂತೆ ದೇವರಾಜ್ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದರು.
ಪಾಲಿಕೆ ಅಧಿಕಾರಿಗಳು ಕಸ ವಿಲೇವಾರಿ ಮಾಡುವ ಗುತ್ತಿಗೆ ಪಡೆದಿದ್ದ ಕಂಪನಿಗೆ ಮಾಹಿತಿ ನೀಡಿತು. ನಂತರ ಪೌರ ಕಾರ್ಮಿಕರು ತಪಾಸಣೆ ಮಾಡಿದಾಗ ಕಸದ ತೊಟ್ಟಿಯಲ್ಲಿ ಹೂವಿನ ಹಾರದ ಜೊತೆ ಸೇರಿದ್ದ ಡೈಮಂಡ್ ನಕ್ಲೇಸ್ ಪತ್ತೆಯಾಗಿದೆ.
ಪೌರ ಕಾರ್ಮಿಕ ಆಂಥೋನಿ ಸ್ವಾಮಿ ಕಸದ ರಾಶಿಗಳ ಮಧ್ಯೆ ಸಿಕ್ಕಿದ ಡೈಮಂಡ್ ನಕ್ಲೇಸ್ ಪತ್ತೆ ಹಚ್ಚಿ ದೇವರಾಜ್ ಅವರ ಗಮನಕ್ಕೆ ತಂದಿದ್ದೂ ಅಲ್ಲದೇ ಅವರಿಗೆ ಮರಳಿಸಿದ್ದಾರೆ. ಪೌರ ಕಾರ್ಮಿಕ ಅಂಥೋನಿ ಅವರ ಶ್ರಮ ಹಾಗೂ ಔದಾರ್ಯಕ್ಕೆ ದೇವರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.