ಭಾರೀ ಮಳೆಯಿಂದಾಗಿ ರಸ್ತೆ ಮೇಲೆ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ 5 ಮಂದಿ ಸೇರಿ 10 ಮಂದಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಬಳಿ ಸಂಭವಿಸಿದೆ.
ಕಾರವಾರ-ಕುಮುಟಾ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೋಟೆಲ್ ನಡೆಸುತ್ತಿದ್ದ ಕುಟುಂಬದ 5 ಮಂದಿ ಸದಸ್ಯರು ಹಾಗೂ ಹೋಟೆಲ್ ಗೆ ಬಂದಿದ್ದ ವಾಹನ ಸವಾರರು ಮೃತಪಟ್ಟಿದ್ದಾರೆ.
ಗುಡ್ಡ ಕುಸಿತದ ವೇಳೆ ಹೋಟೆಲ್ ಬಳಿ ನಿಲ್ಲಿಸಿದ್ದ 2 ಟ್ಯಾಂಕರ್ ಮತ್ತು ಕಾರು ಕೂಡ ಕೊಚ್ಚಿ ಹೋಗಿದೆ ಎಂದು ಹೇಳಲಾಗಿದೆ.
ಸ್ಥಳೀಯ ನಿವಾಸಿಗಳಾದ ಲಕ್ಷ್ಮಣ್ ನಾಯಕ್ (44), ಪತ್ನಿ ಶಾಂತಿ ನಾಯಕ್ (40), ಅವಂತಿಕಾ, ಜಗನ್ನಾಥ (55) ಮತ್ತು ರೋಷನ್ (11) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆದಿದೆ.
ಹೆದ್ದಾರಿ ಮಧ್ಯದಲ್ಲೇ ಗುಡ್ಡ ಕುಸಿತದಿಂದ ರಸ್ತೆ ಸಂಚಾರ ಸಂಪೂರ್ಣ ನಿಲ್ಲಿಸಲಾಗಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರು ಹಾಗೂ ಸ್ಥಳೀಯರು ಪ್ರಯತ್ನ ನಡೆಸಿದ್ದಾರೆ.